Sunday, April 12, 2009

ಅಕಟಕಟಾ...! ಅಶೋಕವನದಲ್ಲಿ ನಿದ್ದೆ ಹೋದ ಸೀತೆ...!

ಕ್ಷಗಾನ ಬಯಲಾಟಗಳು ರಾತ್ರಿ ವೇಳೆಯಲ್ಲೇ ನಡೆಯುವುದು. ಹಗಲಿಡೀ ಕಷ್ಟ ಪಟ್ಟು ನಿದ್ದೆ ಮಾಡುವ
ಕಲಾವಿದರು ಯಕ್ಷರಾತ್ರಿಗಳನ್ನು ಬೆಳಗುವುದೆಂದರೆ ಸಾಮಾನ್ಯದ ಕೆಲಸವಲ್ಲ. ಆದರೂ ಯಕ್ಷಗಾನ
ಪ್ರಸಂಗಗಳ ನಡುನಡುವೆ ಹಲವಾರು ವಿಶೇಷ ಪ್ರಸಂಗಗಳು ನಡೆಯುವುದೂ ಇದೆ.
ಹಾಂ! ಇವು ಯಕ್ಷಗಾನ ಪ್ರಸಂಗಗಳಲ್ಲ. ವೀಕ್ಷಕರ ಮನಸ್ಸಿನಲ್ಲಿ ಸಣ್ಣಗೆ ನಗೆ ಮೂಡಿಸುವ, ಕಲಾವಿದರು
ತಮ್ಮ ಜೀವಮಾನವಿಡೀ ಮರೆಯಲಾಗದಂಥ ಪ್ರಸಂಗಗಳು. ಇಂತಹ ಪ್ರಸಂಗಗಳು ಆಗಾಗ
ನಡೆಯುತ್ತಿರುತ್ತವೆ.
ಇಂತಹ ಪ್ರಸಂಗಗಳ ಬೃಹತ್ ಪಟ್ಟಿಯಲ್ಲಿ ಒಂದನ್ನು ಇಂದಿಗೆ ಆರಿಸಿಕೊಂಡಿದ್ದೇವೆ.
ಯಕ್ಷಗಾನದಲ್ಲಿ ಅಭಿನಯಿಸುವುದನ್ನು ಹವ್ಯಾಸವಾಗಿ ಸ್ವೀಕರಿಸಿದ ಯಕ್ಷಗಾನ ಪ್ರಿಯರೋರ್ವರು ಪ್ರಮುಖ
ಕಲಾವಿದರ ಕೂಡುವಿಕೆಯಲ್ಲಿ ಬಯಲಾಟವನ್ನು ಆಡಿಸಲು ನಿರ್ಧರಿಸಿದ್ದರು. ಪ್ರಸಂಗ ರಾಮಾಯಣ
ಒಂದು ಉಪ ಪ್ರಸಂಗವಾದ ಚೂಡಾಮಣಿ.
ಅಂದರೆ, ಸೀತೆಯನ್ನು ರಾವಣ ಅಪಹರಿಸಿರುತ್ತಾನೆ. ಆಕೆಯನ್ನು ಅರಸಿಕೊಂಡು ರಾಮ-ಲಕ್ಷ್ಮಣರು
ಕಾಡಿನಲ್ಲಿ ಅಲೆದಾಡುತ್ತಿದ್ದಾಗ ಸುಗ್ರೀವ ಸಖ್ಯವಾಗುತ್ತದೆ. ಸುಗ್ರೀವನ ವಾನರ ಸೇನೆ ಸೀತೆಯನ್ನು
ಅರಸಲು ಸಜ್ಜಾಗುತ್ತದೆ.
ಈ ಸೇನೆಯಲ್ಲಿ ರಾಮನಿಗೆ ಅಚ್ಚುಮೆಚ್ಚು ಮತ್ತು ಹಿಡಿದ ಕೆಲಸ ಸಾಧಿಸಬಲ್ಲನೆಂಬ ನಂಬಿಕೆ ಇದ್ದಿದ್ದು
ಆಂಜನೇಯನ ಮೇಲೆ. ಆತನಿಗೆ ತನ್ನ ಉಂಗುರ ಕೊಟ್ಟು ಕಳಿಹಿಸುತ್ತಾನೆ. (ಚೂಡಾಮಣಿ ಪ್ರಸಂಗದ
ಬಗ್ಗೆ ಮುಂದಿನ ದಿನಗಳಲ್ಲಿ ಪ್ರಸಂಗದ ಸುತ್ತ ಅಂಕಣದಲ್ಲಿ ವಿವರಿಸಲಾಗುತ್ತದೆ). ಹೀಗೆ ಹೊರಟ
ಆಂಜನೇಯ ಲಂಕೆ ತಲುಪುತ್ತಾನೆ.
ಈಗ ಇರುವುದೇ ಪ್ರಸಂಗದೊಳಗಿನ ವಿಶೇಷ ಪ್ರಸಂಗ. ಲಂಕೆಯಲ್ಲಿ ರಾವಣ ಸೀತೆಯನ್ನು ಅಶೋಕವನದಲ್ಲಿ ಇರಿಸಿರುತ್ತಾನೆ. ಆಂಜನೇಯ ರಾತ್ರಿ ವೇಳೆಯಲ್ಲಿ ಸೀತೆಯನ್ನು ಅರಸುವ ಕಾಯಕದಲ್ಲಿ
ತೊಡಗುವುದರಿಂದ, ಅಶೋಕವನದಲ್ಲಿ ಸೀತೆ ನಿದ್ದೆ ಹೋಗಿರಬೇಕು. ಯಕ್ಷಗಾನದಲ್ಲಿ ಆಗಿದ್ದೂ ಅದೇ.
ಸೀತೆಯ ಪಾತ್ರ ಮಾಡಿದ್ದ ವ್ಯಕ್ತಿ ರಂಗಸ್ಥಳದಲ್ಲೇ ನಿದ್ದೆ ಹೋಗಬೇಕೆ? ಹನುಮ ಮರದ ಮೇಲಿಂದ ಕೆಳಕ್ಕೆ
ಜಿಗಿದರೂ ಸೀತೆಗೆ ಎಚ್ಚರ ಇಲ್ಲ. "ಪರಿಸ್ಥಿತಿ ಕೆಟ್ಟಿತಲ್ಲ" ಎಂದು ಯೋಚಿಸಿದ ಆಂಜನೇಯ "ಅಮ್ಮಾ,
ಸೀತಮ್ಮಾ..." ಎಂದು ಕರೆದ.
ಊಹೂಂ...! ಸೀತೆಗೆ ಎಚ್ಚರವೇ ಇಲ್ಲ. ಕೊನೆಗೆ ಹನುಮ, ಭಾಗವತರು, ಚೆಂಡೆಯವರು ಎಲ್ಲ ಸೇರಿ
ಮಲಗಿದ್ದ ಸೀತೆಯನ್ನು "ರಾಕ್ಷಸರು ಕುಂಭಕರ್ಣನನ್ನು ಎಬ್ಬಿಸಿದಂತೆ" ಎಬ್ಬಿಸಿದರು. ಅಂತೂ
ಪ್ರಸಂಗದೊಳಗಿನ ಪ್ರಸಂಗ ಮುಗಿಯಿತು. ಪ್ರೇಕ್ಷಕರು "ನಿದ್ದೆ ಹೋದ ಸೀತೆ"ಯನ್ನು ನೆನೆಸಿ ನೆನೆಸಿ
ನಕ್ಕರು. ಚೂಡಾಮಣಿ ಪ್ರಸಂಗ ಮುಂದುವರಿಯುತು.