ಮಧು-ಕೈಟಭ ವಧೆ ದೇವಿ ಮಹಾತ್ಮೆಯ ಉಪಪ್ರಸಂಗ. ದೇವಿಮಹಾತ್ಮೆಯ ಆರಂಭದಲ್ಲೇ
ಮಧು-ಕೈಟಭರ ವಧೆ ಬರುತ್ತದೆ.
ಸೃಷ್ಟಿಯ ಆದಿಯಲ್ಲಿ ಭೂಮಿ ಎಂಬುದೇ ಇರುವುದಿಲ್ಲ. ಈ ಪ್ರಸಂಗದಲ್ಲಿ ತ್ರಿಮೂರ್ತಿಗಳಲ್ಲಿ
ದೊಡ್ಡವರಾರೆಂಬ ವಾಗ್ಯುದ್ಧ ನಡೆಯುವುದು ಮತ್ತು ಮಧು-ಕೈಟಭರ ಜನನವಾಗುವಲ್ಲಿಯವರೆಗೆ
ದೇವಿಮಹಾತ್ಮೆ ಪ್ರಸಂಗದಲ್ಲೇ ವಿವರಿಸಲಾಗಿದೆ. ಹೀಗಾಗಿ ಅದನ್ನು ಮತ್ತೆ ವಿವರಿಸಲು ಹೋಗುವುದಿಲ್ಲ.
ಮಲಗಿದ್ದ ವಿಷ್ಣು ತನ್ನ ಕಿವಿಯಿಂದ ಕಲ್ಮಶ (ವ್ಯಾಕ್ಸ್) ಅನ್ನು ತೆಗೆದೆಸೆದಾಗ ಅದರಿಂದ ಮಧು-ಕೈಟಭರು
ಹುಟ್ಟಿಕೊಳ್ಳುತ್ತಾರೆ. ಸಾಮಾನ್ಯವಾಗಿ ಎಲ್ಲರಲ್ಲೂ ಇರುವ ತಪ್ಪು ಭಾವನೆ ಎಂದರೆ ಮಧು-ಕೈಟಭರು
ರಾಕ್ಷಸರು ಎಂಬುದು. ಆದರೆ, ಅವರು ರಾಕ್ಷಸರಲ್ಲ. ವಿಷ್ಣುವೇ ಅವರ ಅಪ್ಪ.
ಹಸಿವಿನಿಂದ ಕಂಗೆಟ್ಟ ಮಧು-ಕೈಟಭರು ಬ್ರಹ್ಮನನ್ನು ತಿನ್ನಲು ಮುಂದಾದಾಗ ಬ್ರಹ್ಮ ವಿಷ್ಣುವನ್ನು
ಪ್ರಾರ್ಥಿಸುತ್ತಾನೆ. ಬ್ರಹ್ಮನನ್ನು ರಕ್ಷಿಸಲೋಸುಗ ವಿಷ್ಣು ಮಧು-ಕೈಟಭರೊಂದಿಗೆ ಯುದ್ಧ ಆರಂಭಿಸುತ್ತಾನೆ.
ವಿಷ್ಣು ಒಬ್ಬ, ಮಧು-ಕೈಟಭರು ಇಬ್ಬರು. ಮಧುವಿಗೆ ಸುಸ್ತಾದಾಗ ಕೈಟಭ, ಕೈಟಭನಿಗೆ ಸುಸ್ತಾದಾಗ
ಮಧು ಎಂದು ಪಾಳಿಯಲ್ಲಿ ಯುದ್ಧ ಮುಂದುವರಿಸುತ್ತಾರೆ.
ವಿಷ್ಣು ಒಬ್ಬನೇ ಸೆಣಸುತ್ತಾ ಒಂದು ಹಂತದಲ್ಲಿ ಸೋಲಿನ ಭೀತಿಯನ್ನು ಎದುರಿಸುತ್ತಾನೆ. ದಿಕ್ಕು ತೋಚದೆ
ಆದಿ ಮಾಯೆಯನ್ನು ಸ್ತುತಿಸುತ್ತಾನೆ. ಆದಿಮಾಯೆ ಆಕಾಶದಲ್ಲಿ ಮಾಯೆಯ ರೂಪದಲ್ಲಿ ಕಾಣಿಸಿಕೊಂಡು
ಮಧು-ಕೈಟಭರಲ್ಲಿ ಚಂಚಲತೆ ಮೂಡಿಸುತ್ತಾಳೆ. ಯುದ್ಧದಲ್ಲಿ ಇರಬೇಕಾದ ಏಕಾಗ್ರತೆ ತಪ್ಪಿ ಹೋಗುತ್ತದೆ.
ಆಗ ವಿಷ್ಣು ಅವರನ್ನು ಘಾಸಿಗೊಳಿಸುತ್ತಾನೆ.
ಸಾವಿನ ನೋವಲ್ಲಿ ನರಳುತ್ತಿದ್ದ ಮಧು-ಕೈಟಭರಿಗೆ ಜನ್ಮ ರಹಸ್ಯವನ್ನು ತಿಳಿಸಿ ಅನುಗ್ರಹಿಸುತ್ತಾನೆ. ಸಾವು
ಬಂತೆಂದು ನೀವು ಮರುಗಬೇಕಿಲ್ಲ. ಲೋಕದ ಸೃಷ್ಟಿಗಾಗಿ ನಿಮ್ಮ ಕೊಡುಗೆ ಅಗತ್ಯವಿತ್ತು ಎಂದು ಅವರ
ಚರ್ಮದಿಂದ ಭೂಮಿಯನ್ನು ನಿರ್ಮಿಸುತ್ತಾನೆ.
ಬರೆಹ: ದಿವ್ಯಶ್ರೀ ಬದಿಯಡ್ಕ