Saturday, August 29, 2009

ಅಕಟಕಟಾ: ಶ್ರೀಕೃಷ್ಣ ಸಂಧಾನ ಯಶಸ್ವಿಯಾಯಿತು!

ಶ್ರೀಕೃಷ್ಣ ಸಂಧಾನದ ಕತೆ ಗೊತ್ತಿದೆಯಲ್ಲ? ಕೃಷ್ಣ ಎಷ್ಟೇ ಪ್ರಯತ್ನ ಮಾಡಿದರೂ ದುರ್ಯೋಧನ ಪಾಂಡವರಿಗೆ 5 ಗ್ರಾಮಗಳನ್ನು ಬಿಟ್ಟುಕೊಡಲು ಒಪ್ಪುವುದಿಲ್ಲ.

ಆದರೆ, ಒಮ್ಮೆ ತಾಳಮದ್ದಳೆಯೊಂದರಲ್ಲಿ ಎಡವಟ್ಟಾಯಿತು. ಯಾವುದೋ ಸಂಘದ ಸದಸ್ಯರು ತಾಳಮದ್ದಳೆ ಆಡಿಸಿದ್ದರು. ಆ ಊರಿನಲ್ಲಿ ಖ್ಯಾತನಾಮರಾದ ಶಿಕ್ಷಕರೊಬ್ಬರು ಶ್ರೀಕೃಷ್ಣ ಪಾತ್ರಧಾರಿಯಾಗಿ ಸಂಧಾನಕ್ಕೆ ಹೊರಟಿದ್ದರು. ದುರ್ಯೋಧನ ಪಾತ್ರ ಮಾಡಿದವನೋ ಮೇಷ್ಟರ ಪರಮ ಭಕ್ತ. ಮೇಷ್ಟರು ಹೇಳಿದ್ದನ್ನು ಚಾಚೂ ತಪ್ಪದೆ ನಡೆಸುವಾತ. ಆತನ ಸಮಸ್ಯೆ ಒಂದೇ, ಪರಮಾತ್ಮ ಹೊಟ್ಟೆಗಿಳಿಯದೆ ಕೆಲಸ ಆಗುವುದಿಲ್ಲ.

ತಾಳಮದ್ದಳೆಯಲ್ಲೂ ಹೀಗೇ ಆಯಿತು. ಪರಮಾತ್ಮನನ್ನು ಸೇವಿಸಿಕೊಂಡೇ ವೇದಿಕೆಯೇರಿದ್ದ ದುರ್ಯೋಧನ. ಶ್ರೀಕೃಷ್ಣ ಪಾತ್ರಧಾರಿ ಮೇಷ್ಟರು ಸಂಧಾನಕ್ಕೆ ಬಂದರು. ಒಂದಷ್ಟು ಹೊತ್ತು ವಾಗ್ಯುದ್ಧ ನಡೆಯಿತು.
ಕೊನೆಗೆ ದುರ್ಯೋಧನ, ಶ್ರೀಕೃಷ್ಣಾ ನೀನು ಹೇಳಿದಂತೆಯೇ ಆಗಲಿ. ಪಾಂಡವರಿಗೆ 5 ಗ್ರಾಮಗಳನ್ನು ಬಿಟ್ಟುಕೊಟ್ಟಿದ್ದೇನೆ ಎನ್ನಬೇಕೆ?
ನಂತರ ಯಾಕೆ ಹೇಗೆ ಮಾಡಿದೆ? ಎಂದರೆ ಆತನ ಉತ್ತರ ಏನು ಗೊತ್ತೆ ?- ಮೇಷ್ಟರು ಹೇಳಿದ ಮೇಲೆ ಇಲ್ಲಾ ಎನ್ನಲಾಗುತ್ತದೆಯೆ?
ಅಕಟಕಟಾ.... ಹೀಗೂ ಉಂಟಲ್ಲ ಎಂದು ಜನ ಉದ್ಘರಿಸಿದರು.