Sunday, April 26, 2009

ರಂಗಾಂತರಂಗ: ಯಕ್ಷಗಾನದ ಮೇರುಪ್ರತಿಭೆ ಶೇಣಿ



ಶೇಣಿ ಗೋಪಾಲಕೃಷ್ಣ ಭಟ್ಟರು ಯಕ್ಷಗಾನ ಕಂಡ ಮಹಾನ್ ಪ್ರತಿಭೆ. ಮೂಲತಃ ಹರಿದಾಸರಾಗಿದ್ದ
ಶೇಣಿಯವರು ಯಕ್ಷಗಾನ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ. ಯಕ್ಷಗಾನ ಆಟ ಮತ್ತು
ಕೂಟ(ತಾಳಮದ್ದಳೆ) ಎರಡರಲ್ಲೂ ಮಿಂಚಿದ ಶೇಣಿಯವರು ಇಂದಿನ ಎಲ್ಲಾ ಕಲಾವಿದರಿಗೂ ಮಾದರಿ.
ಕೇರಳದ ಕಾಸರಗೋಡು ಜಿಲ್ಲೆಯ ಉಬ್ಬನದಲ್ಲಿ ಲಕ್ಷ್ಮೀ ಮತ್ತು ನಾರಾಯಣ ಭಟ್ಟ ದಂಪತಿಗೆ 1918ರ
ಏಪ್ರಿಲ್ 7 ರಂದು ಜನಿಸಿದ ಶೇಣಿ, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೇಳ ಮತ್ತು ಕುಂಬಳೆಯಲ್ಲಿ
ಪೂರೈಸಿದರು. ನಂತರ ಮಹಾಜನ ಸಂಸ್ಕೃತ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು.
ಶಿಕ್ಷಣ ಪೂರ್ತಿಗೊಳಿಸಿದ ನಂತರ ಒಂದಷ್ಟು ಸಮಯ ಶಿಕ್ಷಕರಾಗಿಯೂ ಕೆಲಸ ಮಾಡಿದ್ದರು. ಶೇಣಿ
ಯಕ್ಷಗಾನಕ್ಕೆ ಪ್ರವೇಶಿಸಿದ್ದು ಆಕಸ್ಮಿಕವಾಗಿ. ಆದರೆ, ನಂತರ ಇಡೀ ಯಕ್ಷಗಾನ ಕ್ಷೇತ್ರವನ್ನೇ
ಬೆಳಗಿದಂತಹ ಪ್ರತಿಭೆ ಶೇಣಿಯವರದ್ದು.
ಆಟ ಮತ್ತು ಕೂಟಗಳನ್ನು ನೋಡುತ್ತಾ ಅದರತ್ತ ಆಕರ್ಷಿತರಾದ ಶೇಣಿಯವರು, ಮುಖ್ಯವಾಗಿ ವೆಂಕಪ್ಪ
ಶೆಟ್ಟಿ ಮತ್ತು ಕಿರಿಕ್ಕಾಡು ವಿಷ್ಣು ಭಟ್ಟರಿಂದ ಪ್ರೇರಿತರಾಗಿದ್ದರು. ನಂತರ ಕೂಡ್ಲು ಮೇಳವನ್ನು ಸೇರಿದ
ಶೇಣಿಯವರು ಬಹುಕಾಲ ಮಲ್ಪೆ ಶಂಕರನಾರಾಯಣ ಸಾಮಗರೊಂದಿಗೆ (ಶೇಣಿಯವರು
ಹರಿದಾಸರಾಗಲು ಪ್ರೇರಣೆ ಇವರದ್ದೇ) ಅಭಿನಯಿಸಿದರು.
ಕೂಡ್ಲು ಮೇಳದ ನಂತರ ಧರ್ಮಸ್ಥಳ, ಇರಾ, ಸುರತ್ಕಲ್ ಮೇಳಗಳಲ್ಲಿ ವೃತ್ತಿಯನ್ನು ಮುಂದುವರಿಸಿದ
ಶೇಣಿಯವರು ಯಕ್ಷಗಾನ ಕ್ಷೇತ್ರದಲ್ಲಿ ಮೀರಿಸಲು ಅಸಾಧ್ಯವಾದ ಪ್ರತಿಬೆ. ಶೇಣಿಯವರನ್ನು ಯಕ್ಷರಂಗದ
ಭೀಷ್ಮ ಎಂದೂ ಕರೆಯಲಾಗುತ್ತದೆ. (ಶೇಣಿಯವರು ಯಾಕೆ ಯಕ್ಷರಂಗದ ಭೀಷ್ಮ ಎಂಬ ಬಗ್ಗೆ ಧೀಂಕಿಟ
ಬಳಗ ಮಂದಿನ ದಿನಗಳಲ್ಲಿ ಲೇಖನ ಪ್ರಕಟಿಸಲಿದೆ. ನೆನಪಿಡಿ- ಯಕ್ಷರಂಗದ ಭೀಷ್ಮ ಒಬ್ಬರೇ. ಅದು
ಶೇಣಿ).
ಬಪ್ಪನಾಡು ಕ್ಷೇತ್ರ ಮಹಾತ್ಮೆಯಲ್ಲಿ ಬಪ್ಪ ಬ್ಯಾರಿಯ ಪಾತ್ರ ಶೇಣಿಯವರ ಮಹೋನ್ನತ ಪಾತ್ರ. ಈ
ಪಾತ್ರಕ್ಕೆ ಜೀವ ಕೊಟ್ಟವರೇ ಶೇಣಿ. ಈಗ ಅವರಷ್ಟು ಪರಿಪೂರ್ಣವಾಗಿ ಬಪ್ಪ ಬ್ಯಾರಿಯ ಪಾತ್ರ
ಮಾಡುವವರು ಯಾರೂ ಇಲ್ಲ. ಬಪ್ಪ ಬ್ಯಾರಿಯ ಪಾತ್ರಕ್ಕಾಗಿ ಶೇಣಿಯವರು ಇಸ್ಲಾಮನ್ನೂ ಅಧ್ಯಯನ
ಮಾಡಿದ್ದರು. ನಮಾಜು ಮಾಡುವ ವಿಧಾನ, ಕುರಾನಿನ ಅಧ್ಯಾಯಗಳನ್ನೂ ಅವರು ಕಲಿತಿದ್ದರು.
ಶೇಣಿಯವರು ರಾವಣನ ಪಾತ್ರ ಮಾಡಿದರೆ ರಾಮನೇ ಅವರ ಮುಂದೆ ಸೋತು ಬಿಡುತ್ತಿದ್ದ. ಅಂತಹ
ವಾಕ್ಚಾತುರ್ಯ ಅವರದ್ದು. ಬರೇ ಮಾತಿನ ಮಣಿಗಳನ್ನು ಪೋಣಿಸುವುದು ಮಾತ್ರವಲ್ಲ, ಅವರ ಮಾತಿನಲ್ಲಿ
ಅಷ್ಟೇ ತೂಕವಿರುತ್ತಿತ್ತು. ಮಾತಿ ಹಿಂದೆ ಜ್ಞಾನಸಾಗರವೇ ಇತ್ತು.
ಅರಸಿಕೊಂಡು ಬಂದ ಪ್ರಶಸ್ತಿಗಳು: ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ (1990), ಕೇರಳ
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ(1993), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಪ್ರಶಸ್ತಿ (1994),
ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ (2005)
ಇಹಲೋಕಕ್ಕೆ ಕೊನೆಯ ನಮನ: ಯಕ್ಷಗಾನದ ಮೇರು ಪ್ರತಿಭೆ ಶೇಣಿಯವರು 2006ರ ಜುಲೈ
18ರಂದು ಕಾಸರಗೋಡಿನಲ್ಲಿ ಇಹಲೋಕಕ್ಕೆ ವಿದಾಯ ಹೇಳಿದರು. ಅದೆಷ್ಟೋ ಯಕ್ಷರಾತ್ರಿಗಳನ್ನು ಬೆಳಗಿದ ಶೇಣಿಯವರು,
ತಮ್ಮ ಶಿಷ್ಯಂದಿರಿಗೆ ಸನ್ಮಾರ್ಗವನ್ನೇ ತೋರಿಸಿಕೊಟ್ಟಿದ್ದಾರೆ. ಯಕ್ಷಗಾನದ ಕಂಪನ್ನು ಜಗದ
ಉದ್ದಗಲಕ್ಕೂ ಹಬ್ಬಿಸಿದ ಕೀರ್ತಿ ಶೇಣಿಯವರಿಗೆ ಸಲ್ಲುತ್ತದೆ.