Sunday, July 12, 2009

ಪ್ರಸಂಗದ ಸುತ್ತ: ಶಾಂಭವೀ ವಿಲಾಸ


ದೇವಿ ಮಹಾತ್ಮೆಯಲ್ಲಿ ಶಾಂಭವೀ ವಿಲಾಸ ಅತೀ ಮುಖ್ಯವಾದ ಉಪಪ್ರಸಂಗ. ಹಲಾವರು ಘೋರ
ರಾಕ್ಷಸರನ್ನು ದೇವಿ ಸಂಹರಿಸುವ ಕಥೆ ಇದರಲ್ಲಿದೆ.
ಷೋಣಿತಾಪುರದಲ್ಲಿ (ರಾಕ್ಷಸಲೋಕದ ರಾಜಧಾನಿ) ಧೂಮ್ರಾಕ್ಷ, ಚಂಡ-ಮುಂಡ, ಶುಂಭ-ನಿಶುಂಭ,
ರಕ್ತಬೀಜಾದಿ ರಾಕ್ಷಸರ ಜನನವಾಗುತ್ತದೆ. ಶುಂಭ ರಾಕ್ಷಸರ ದೊರೆ. ನಿಶುಂಭ ಆತನ ತಮ್ಮ. ರಕ್ತಬೀಜ
ಪ್ರಧಾನಮಂತ್ರಿ. 14 ಲೋಕಗಳನ್ನು ವಶಪಡಿಸಿಕೊಳ್ಳುವ ಹೆಬ್ಬಯಕೆಯಲ್ಲಿ ರಾಕ್ಷಸರು ಬ್ರಹ್ಮನ ಕುರಿತು
ತಪಸ್ಸನ್ನಾಚರಿಸಿ ವರ ಪಡೆಯುತ್ತಾರೆ.
ವರಬಲದಿಂದ ಕೊಬ್ಬಿದ ರಾಕ್ಷಸರಿಂದ ಉಪಟಳ ಶುರು. ಭೂಮಿ, ಪಾತಾಳಗಳನ್ನು ಗೆದ್ದ ಶುಂಭದೊರೆ
ಸ್ವರ್ಗಲೋಕದತ್ತ ಧಾವಿಸುತ್ತಾನೆ. ಇಂದ್ರ ಸೋತು ಸುಣ್ಣವಾಗುತ್ತಾನೆ. ಶ್ರೀಹರಿಯನ್ನು ಪ್ರಾರ್ಥಿಸುತ್ತಾನೆ.
ಶ್ರೀಹರಿ ಆದಿಮಾಯೆಯನ್ನು ಸ್ತುತಿಸುವಂತೆ ಸೂಚಿಸುತ್ತಾನೆ.
ಆದಿಮಾಯೆ ಶಾಂಬವೀ ರೂಪವನ್ನು ತಾಳಿ ಮಹೇಂದ್ರಗಿರಿಯಲ್ಲಿ ನೆಲೆಸುತ್ತಾಳೆ. ಗಾಯನ ಮಾಡುತ್ತಾ
ರಾಕ್ಷಸರನ್ನು ತನ್ನತ್ತ ಸೆಳೆಯುತ್ತಾಳೆ. ಆಕೆಯ ಬಗ್ಗೆ ಮಾಹಿತಿ ಪಡೆದ ಶುಂಭ ದೊರೆ ಆಕೆಯನ್ನು ವರಿಸುವ
ಅಪೇಕ್ಷೆಯಲ್ಲಿ ದೂತನ ಮುಖಾಂತರ ಸುದ್ದಿ ಕಳುಹಿಸುತ್ತಾಳೆ. ಇದಕ್ಕೆ ಅಸಮ್ಮತಿ ಸೂಚಿಸಿದ ಶಾಂಭವಿ
"ಶುಂಭನೇ ಬರಲಿ ಶಂಭುವೇ ಬರಲಿ ಹೆದರಲಾರೆ" ಎಂದು ಹೇಳಿ ಕಳುಹಿಸುತ್ತಾಳೆ.
ಇಷ್ಟಕ್ಕೇ ಶುಂಭ ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ, ಮದೋನ್ಮತ್ತನಾದ ಆತ ಧೂಮ್ರಾಕ್ಷನನ್ನು
ಕಳುಹಸುತ್ತಾಳೆ. ದೇವಿ ತನ್ನ ಕಣ್ಣ ನೋಟ ಮಾತ್ರದಿಂದಲೇ ಆತನ್ನು ಸುಟ್ಟು ಬೂದಿ ಮಾಡುತ್ತಾಳೆ.
ನಂತರ ಅಖಂಡ ಬ್ರಹ್ಮಚಾರಿಗಳೆಂದೇ ಖ್ಯಾತಿ ಪಡೆದ ಚಂಡ-ಮುಂಡರ ಸರದಿ.
ಬ್ರಹ್ಮಚಾರಿಗಳಾಗಿರುವವರೆಗೆ ಸಾವು ಬಾರದಂತೆ ಅವರು ವರ ಪಡೆದಿದ್ದರು. ಆದರೆ, ದೇವಿಯನ್ನು
ನೋಡಿದೊಡನೆ ಮನಸ್ಸಿನಲ್ಲಿ ಮೋಹ, ಕಾಮನೆಗಳು ಹುಟ್ಟಿಕೊಂಡು ಬ್ರಹ್ಮಚರ್ಯವನ್ನು
ಭಂಗಗೊಳಿಸಿದವು.
ಆದರೆ, ಚಂಡ-ಮುಂಡರನ್ನು ಸುಲಭದಲ್ಲಿ ವಧಿಸುವುದು ಅಸಾಧ್ಯ. ಅದಕ್ಕಾಗಿ ದೇವಿ ಭದ್ರಕಾಳಿಯಾಗಿ
ರೂಪಾಂತರ ಹೊಂದಿ ಅವರ ಶಿರವನ್ನು ಚೆಂಡಾಡುತ್ತಾಳೆ.
ಕ್ರೋಧಾವಿಷ್ಟನಾದ ಶುಂಭ ತಾನೇ ಹೊರಡಲು ಅಣಿಯಾಗುತ್ತಾನೆ. ರಕ್ತಬೀಜ ಆತನನ್ನು ತಡೆದು ಬುದ್ಧಿ
ಹೇಳುತ್ತಾನೆ. ಆದರೂ ಕೇಳಿಸಿಕೊಳ್ಳದೆ ರಕ್ತಬೀಜನನ್ನೇ ಲೇವಡಿ ಮಾಡುತ್ತಾನೆ. ಕಡೆಗೆ ರಕ್ತಬೀಜ
ತಾನು ಹೋಗುವುದಾಗಿ ಹೇಳಿ ದೇವಿ ಇರುವ ಸ್ಥಳಕ್ಕೆ ಬರುತ್ತಾನೆ.
ರಕ್ತಬೀಜ ಭೂಮಿಗೆ ಸೋಕಿದ ಆತನ ರಕ್ತದ ಹನಿಯಷ್ಟು ರಾಕ್ಷಸರು ಹುಟ್ಟುವಂಥ ವರ ಪಡಿದಿದ್ದ. ದೇವಿ
ರಕ್ತೇಶ್ವರಿಯಾಗಿ ಆತನನ್ನು ಕೊನೆಗಾಣಿಸುತ್ತಾಳೆ. ನಂತರ ನಿಶುಂಭನನ್ನೂ ಯಮಪುರಿಗೆ ಅಟ್ಟುತ್ತಾಳೆ.
ತನ್ನವರೆಲ್ಲರೂ ಮಡಿದ ಹತಾಶೆಯಿದ್ದರೂ ದೇವಿಯನ್ನು ವರಿಸಲೇಬೇಕೆಂಬ ಉತ್ಕಟಾಪೇಕ್ಷೆಯಲ್ಲಿ ಬರುವ
ಶುಂಭನನ್ನು ಶಾಂಭವಿಯಾಗಿ ವಧಿಸುತ್ತಾಳೆ.
ಲೇಖನ: ಪ್ರದೀಪ