ಯಕ್ಷಗಾನದ ಒಂದು ಪ್ರಸಂಗವನ್ನು ಆಡಲು ಬೇಕಾದ ಎಲ್ಲಾ ರಂಗಸಜ್ಜಿಕೆ ನಡೆಯುವುದು ಚೌಕಿಯಲ್ಲಿ.
ಅರ್ಥಾತ್ ಗ್ರೀನ್ ರೂಮ್. ಈ ಚೌಕಿಗೂ ಅದರದ್ದೇ ಆದ ನಿಯಮವಿದೆ. ಎಲ್ಲೆಂದರಲ್ಲಿ ಕುಳಿತು ಬಣ್ಣ
ಹಚ್ಚಿಕೊಳ್ಳುವ ಪದ್ಧತಿ ಯಕ್ಷಗಾನದಲ್ಲಿ ಇಲ್ಲ.
ಒಬ್ಬೊಬ್ಬ ವೇಷಧಾರಿಗೆ ಅವರದ್ದೇ ಆದ ಸ್ಥಳ ಇದೆ. ಇದನ್ನು ಯಕ್ಷಗಾನದ ಭಾಷೆಯಲ್ಲಿ ಮೊದಲ ಪೆಟ್ಟಿಗೆ
2ನೇ ಪೆಟ್ಟಿಗೆ........ ಎಂದು ಸೂಚಿಸಲಾಗುತ್ತದೆ. ಅಂದರೆ ಇವು ವೇಷಕ್ಕೆ ಬೇಕಾದ ಬಣ್ಣ ಮತ್ತಿತರ
ಸಾಮಗ್ರಿಗಳನ್ನು ತುಂಬಿರುವ ಪೆಟ್ಟಿಗೆಗಳ ಸಂಖ್ಯೆಗಳು. ಈ ವೇಷಗಳು ಕಲಾವಿದರ ವೃತ್ತಿಹಿರಿತನದ
ಆಧಾರದ ಮೇಲೆ ಅವಲಂಬಿಸಿವೆ.
ಮೊದಲ ಪೆಟ್ಟಿಗೆ ಬಣ್ಣದ ವೇಷಧಾರಿಗೆ ಸೇರಿದ್ದು, ಅಂದರೆ ಆತ ವೃತ್ತಿಯಲ್ಲಿ ಎಲ್ಲರಿಗಿಂತ ಹಿರಿಯ
ನಂತರದ ಪೆಟ್ಟಿಗೆಗಳ ಸರಣಿ ಈ ಕೆಳಗಿನಂತಿದೆ.
1. ಬಣ್ಣದ ವೇಷಧಾರಿ (ಹೆಚ್ಚಾಗಿ ರಾಕ್ಷಸ ವೇಷಗಳು)
2. ಎದುರು ವೇಷಧಾರಿ (ಬಣ್ಣದ ವೇಷಧಾರಿಯ ವಿರುದ್ಧ ಪಕ್ಷದಲ್ಲಿರುವ ಮುಖಂಡರು)
3. ಪೀಠಿಕೆ ವೇಷಧಾರಿಗಳು (ಪ್ರಸಂಗದ ಆರಂಭದಲ್ಲಿ ಪೀಠಿಕೆಯನ್ನು ನಿರ್ವಹಿಸುವ ಪಾತ್ರಗಳು. ಉದಾ:
ದೇವೇಂದ್ರ, ಅರ್ಜುನ ಇತ್ಯಾದಿ)
4. ಸ್ತ್ರೀವೇಷಧಾರಿಗಳು
5. ಪುಂಡುವೇಷ (ಕಿರೀಟ ಇಲ್ಲದ ವೇಷಗಳು. ಉದಾ: ಋಷಿಗಳು)
6. ಬಲ ವೇಷಧಾರಿಗಳು (ಸಖೀ ಪಾತ್ರಧಾರಿಗಳು, ಗಣಗಳು ಇನ್ನಿತರ ಸಣ್ಣಪುಟ್ಟ ವೇಷಧಾರಿಗಳು)
7. ಅಡ್ಡ ಚೌಕಿ- ಹಾಸ್ಯಗಾರರದ್ದು.
ಅಡ್ಡಚೌಕಿ: ಮೇಳದಲ್ಲಿ ಹಾಸ್ಯಗಾರರಿಗೆ ಯಾವತ್ತೂ ವಿಶೇಷ ಸ್ಥಾನಮಾನ. 1 ಪ್ರಸಂಗದ ಕಳೆ ಹೆಚ್ಚಿಸುವ,
ಪ್ರೇಕ್ಷಕರನ್ನು ಸೆಳೆದಿಟ್ಟುಕೊಳ್ಳುವ ಎಲ್ಲಾ ಜವಾಬ್ದಾರಿಯೂ ಇವರದ್ದೇ. ಹೀಗಾಗಿ, ಉಳಿದ
ವೇಷಧಾರಿಗಳು ಮೇಳದ ದೇವರ ಎದುರು ಉದ್ದ ಸಾಲುಗಳಲ್ಲಿ ಕುಳಿತರೆ, ಹಾಸ್ಯಗಾರರು ಅಡ್ಡಕ್ಕೆ,
ಅಂದರೆ ದೇವರಿಗೆ ಮುಖ ಹಾಕಿ ಕುಳಿತುಕೊಳ್ಳುತ್ತಾರೆ.
ಲೇಖನ: ವಿದ್ಯಾಶಂಕರಿ
Sunday, July 26, 2009
Subscribe to:
Posts (Atom)