Sunday, June 14, 2009

ಪ್ರಸಂಗದ ಸುತ್ತ: ಮಹಿಷಾಸುರ ಮರ್ದಿನಿ

ದು ದೇವಿ ಮಹಾತ್ಮೆಯ ಮತ್ತೊಂದು ಉಪಪ್ರಸಂಗ. ಮಹಿಷಾಸುರನ ಜನನದಿಂದ ಸಾವಿನ ವರೆಗಿನ ಕಥಾ ಹಂದರವನ್ನು ಇದು ಒಳಗೊಂಡಿದೆ.
ವಿದ್ಯುನ್ಮಾಲಿ ಮತ್ತು ಮಾಲಿನಿ ರಾಕ್ಷಸ ದಂಪತಿಗೆ ಬಹುಕಾಲ ಮಕ್ಕಳಿರಲಿಲ್ಲ. ಹೇಗಾದರೂ ಪುತ್ರಪ್ರಾಪ್ತಿಯಾಗಲೇಬೇಕೆಂದು ನಿರ್ಧರಿಸಿದ ಮಾಲಿನಿ ತಪಸ್ಸನ್ನಾಚರಿಸಲು ನಿರ್ಧರಿಸುತ್ತಾಳೆ. ಕಾಡಿಗೆ ತೆರಳಿ ಮಹಿಷಿ ಅಂದರೆ ಎಮ್ಮೆಯ ರೂಪದಲ್ಲಿ ತಪಸ್ಸಿಗೆ ತೊಡಗುತ್ತಾಳೆ.
ಆಕೆಯ ಕಠೋರ ತಪಸ್ಸಿನಿಂದ ಹೊಮ್ಮುವ ಶಾಖ ಋಷಿಯೊಬ್ಬನ ತಪಸ್ಸಿಗೆ ಭಂಗ ತರುತ್ತದೆ. ಇದರಿಂದ ಕೋಪಾವಿಷ್ಠನಾದ ಋಷಿ ಜ್ಞಾನದೃಷ್ಟಿಯಿಂದ ಮಾಲಿನಿ ತಪಸ್ಸನ್ನಾಚರಿಸುವುದನ್ನು ತಿಳಿದುಕೊಳ್ಳುತ್ತಾನೆ. "ಮಹಿಷಿಯ ರೂಪದಲ್ಲಿ ತಪಸ್ಸಾನಚರಿಸುತ್ತಿರುವುದರಿಂದ ನಿನ್ನ ಹೊಟ್ಟೆಯಲ್ಲಿ ಮಹಿಷ ಅಂದರೆ ಕೋಣವೇ ಜನ್ಮತಾಳಲಿ" ಎಂದು ಶಪಿಸುತ್ತಾನೆ.
ಇದರ ಫಲವೇ ಮಹಿಷಾಸುರನ ಜನನ. ಮಹಿಷಾಸುರ ಬೆಳಯುತ್ತಿದ್ದ. ಒಮ್ಮೆ ವಿದ್ಯುನ್ಮಾಲಿ ದೇವೇಂದ್ರನ ಮೇಲೆ ಯುದ್ಧ ಸಾರುತ್ತಾನೆ. ಯುದ್ಧದಲ್ಲಿ ವಿದ್ಯುನ್ಮಾಲಿಯ ಸೇನೆ ಸೋತು, ಆತ ಸಾವನ್ನಪ್ಪುತ್ತಾನೆ. ಇದರ ಸೇಡು ತೀರಿಸಿಕೊಳ್ಳಲು ಬಾಲಕ ಮಹಿಷ ಹೊರಟಾಗ ಮಾಲಿನಿ ತಡೆದು, ತಪಸ್ಸನ್ನಾಚರಿಸಿ ಶಕ್ತಿ ಸಂಪಾದಿಸಿಕೊಳ್ಳುವಂತೆ ಮಹಿಷನಿಗೆ ಸೂಚಿಸುತ್ತಾಳೆ.
ಅದರಂತೆ ತಪಸ್ಸನ್ನಾಚರಿಸಿ ಸಿಂಹವನ್ನು ಪಳಗಿಸಬಲ್ಲ ಹೆಣ್ಣಿನ ಹೊರತಾಗಿ ಬೇರಾರಿಂದಲೂ ಸಾವು ಬಾರದಂತಹ ವರ ಪಡೆಯುತ್ತಾನೆ. ವರಬಲದಿಂದ ಕೊಬ್ಬಿದ ಮಹಿಷ ದೇವಾದಿ ದೇವತೆಗಳನ್ನು ಸೋಲಿಸುತ್ತಾರೆ. ದೇವತೆಗಳು ಯಥಾಪ್ರಕಾರ ತ್ರಿಮೂರ್ತಿಗಳ ಮೊರೆ ಹೋಗುತ್ತಾರೆ. ತ್ರಿಮೂರ್ತಿಗಳು ಆದಿಮಾಯೆಯನ್ನು ಸ್ತುತಿಸಲು ಸೂಚಿಸುತ್ತಾರೆ.
ಸಿಂಹವಾಹಿನಿಯಾಗಿ ಪ್ರಕಟಗೊಳ್ಳುವ ಆದಿಮಾಯೆ ಮಹಿಷಾಸುರನನ್ನು ಕೊನೆಗಾಣಿಸುತ್ತಾಳೆ. ಅಲ್ಲಿಂದ ತರುವಾಯ ಆಕೆ, ಮಹಿಷಾಸುರಮರ್ದಿನಿಯಾಗಿ ಭಕ್ತರ ಹೃದಯಮಂದಿರದಲ್ಲಿ ನೆಲೆಸುತ್ತಾಳೆ.
ಇದು ಮಹಿಷಾಸುರಮರ್ದಿನಿ ಪ್ರಸಂಗ. ಇದನ್ನು ಆಡಲು ಕನಿಷ್ಠ 3 ಗಂಟೆಯಾದರೂ ಬೇಕು.
ಲೇಖನ: ಸಂಗೀತಾ ಪುತ್ತೂರು