ರಂಗಸ್ಥಳದಲ್ಲಿನ ಸ್ತ್ರೀಪಾತ್ರಧಾರಿಗಳನ್ನು ಸ್ತ್ರೀಯೆಂದೇ ಭ್ರಮಿಸುವ ಪ್ರಸಂಗಗಳು ಹಲವು. ಅದರಲ್ಲೂ
ಯಕ್ಷಗಾನದ ಒಳ-ಹೊರಗನ್ನು ಅರಿತಿಲ್ಲದವರೇ ಈ ರೀತಿ ಭ್ರಮೆಗೊಳಗಾಗುತ್ತಾರೆ. ಒಮ್ಮೆ
ಹೀಗಾಗಿತ್ತು...
ಬೆಂಗಳೂರಿನ ಕಾಳದಾಸ ಲೇಔಟ್. ರಮೇಶ್ ಚಂದ್ರ ನ್ಯಾಯವಾದಿಗಳ ಮನೆ "ಹಂಸಿಕೆ"ಯ
ಗೃಹಪ್ರವೇಶ. ಈ ಪ್ರಯುಕ್ತ ವಿಶ್ವಾಮಿತ್ರ-ಮೇನಕೆ ಆಟ ಹಮ್ಮಿಕೊಳ್ಳಲಾಗಿತ್ತು. ನಾರಾಯಣ
ಶಬರಾಯರ ಭಾಗವತಿಕೆ. ಅಷ್ಟಾವಧಾನಿ ವಸಂತ ಭಾರದ್ವಾಜರ ವಿಶ್ವಾಮಿತ್ರ, ಬೇಗಾರು
ಶಿವಕುಮಾರ್ ಮೇನಕೆ. ವಿಶೇಷ ಇರುವುದು ಇಲ್ಲಲ್ಲ. ನಂತರ ನಡೆದ ಸನ್ಮಾನ ಸಮಾರಂಭದಲ್ಲಿ.
ಮಾಜಿ ಶಾಸಕ, ಹಿರಿಯ ನ್ಯಾಯವಾದಿ ಸುಬ್ಬಾರೆಡ್ಡಿಯವರು ಕಲಾವಿದರನ್ನು ಸನ್ಮಾನಿಸುತ್ತಿದ್ದರು.
ಒಬ್ಬೊಬ್ಬ ಕಲಾವಿದರನ್ನೂ ಸರದಿಯಂತೆ ಗೌರವಿಸುತ್ತಾ ಮೇನಕೆ ಪಾತ್ರಧಾರಿ ಬೇಗಾರರ ಸರದಿ
ಬಂತು. ಮೇನಕೆಯ ವೇಷದಲ್ಲೇ ಬೇಗಾರು ವೇದಿಕೆಗೆ ಬಂದರು.
ಎಲ್ಲಾ ಕಲಾವಿದರಿಗೂ ಹಾರ ಹಾಕಿ, ಶಾಲು ಹೊದೆಸಿ ಗೌರವಿಸಿದ್ದ ಸುಬ್ಬಾರೆಡ್ಡಿಯವರು ಈ ಬಾರಿ
ಮಾತ್ರ ಸ್ವಲ್ಪ ಹಿಂಜರಿದರು. ಎಲ್ಲಾ ಕಾಣಿಕೆಗಳನ್ನೂ ಕೈಗಿತ್ತು... "ಅಮ್ಮಾ ಮೇನಕೆ... ತುಂಬಾ ಚೆನ್ನಾಗಿ
ಅಭಿನಯಿಸಿದ್ದೀಯಮ್ಮ. ನಿನಗೆ ದೇವರು ಒಳ್ಳೆಯದು ಮಾಡಲಿ" ಎಂದು ಹರಸಿದರು.
ಪರಿಸ್ಥಿತಿಯನ್ನು ಅರ್ಥೈಸಿಕೊಂಡ ರಮೇಶ್ ಚಂದ್ರ ನ್ಯಾಯವಾದಿಗಳು "ಅದು ಸ್ತ್ರೀ ಪಾತ್ರದಲ್ಲಿರುವ
ಪುರುಷ. ಬೇಗಾರು ಶಿವಕುಮಾರ್" ಎಂದು ಪರಿಚಯಿಸಿದಾಗ ರೆಡ್ಡಿಯವರು ತಬ್ಬಿಬ್ಬು. ಮತ್ತೆ
ಬೇಗಾರರನ್ನು ಹತ್ತಿರ ಕರೆದು ಗೌರವಿಸಿದರು ಸುಬ್ಬಾ ರೆಡ್ಡಿಯವರು.
(ಈ ಮಾಹಿತಿಯನ್ನು ಸ್ವತಃ ಬೇಗಾರು ಶಿವಕುಮಾರ್ ಧೀಂಕಿಟ ಬಳಗಕ್ಕೆ ನೀಡಿದ್ದಾರೆ.)
Sunday, July 5, 2009
Subscribe to:
Posts (Atom)