Sunday, August 16, 2009

ರಂಗಾಂತರಂಗ: ಸ್ತ್ರೀವೇಷ ಸೆಟ್ ಅಥವಾ ಮಳೆಗಾಲದ ಸೆಟ್

ಇಂದಿನ ಪೀಳಿಗೆಯ ಬಹುತೇಕ ಮಂದಿಗೆ ಯಕ್ಷಗಾನ ಎಂದರೆ 4 ಗೋಡೆಗಳ ಮಧ್ಯೆ ನಡೆಯುವುದು ಎಂಬುದಷ್ಟೇ ಗೊತ್ತು. ಇದರಲ್ಲಿ ಮಳೆಗಾಲ ಮಾತ್ರ ಆಡುವ "ಸ್ತೀವೇಷ ಸೆಟ್" ಎಂದರೆ ಕೆಕರಾಮಕರಾ ನೋಡುವವರೇ ಹೆಚ್ಚು.
ಯಕ್ಷಗಾನ ಬಯಲಾಟಗಳು ಬೇಸಗೆಯಲ್ಲಿ ಮಾತ್ರ ನಡೆಯುತ್ತವೆ. ಹೀಗಾಗಿ, ಕಲಾವಿದರಿಗೆ ಮಳೆಗಾಲದಲ್ಲಿ ಕೆಲಸವಿರುವುದಿಲ್ಲ. ಮಳೆಗಾಲ ಜೀವನ ಸಾಗಿಸಬೇಕೆಂಬ ದೃಷ್ಟಿಯಿಂದ ಆರಂಭವಾದದ್ದು "ಮಲೆಗಾಲದ ಸೆಟ್".
ಯಕ್ಷಗಾನದ ಆರಂಭದ ಕಾಲದಲ್ಲಿ ಇದನ್ನು "ಸ್ತ್ರೀವೇಷದ ಸೆಟ್" ಎಂದು ಕರೆಯಲಾಗುತ್ತಿತ್ತು. ತೀರಾ ಇತ್ತೀಚಿನ ದಿನಗಳಲ್ಲಿ ಇವು ಮಳೆಗಾಲದ ಮೇಳಗಳಾಗಿ ಬದಲಾಗಿವೆ.
ಏನಿದು?: ಸ್ತ್ರೀ ವೇಷದ ಸೆಟ್ ಅಥವಾ ಮಳೆಗಾಲದ ಸೆಟ್ ಗಳಲ್ಲಿ ಕಲಾವಿದರ ದೊಡ್ಡ ತಂಡ ಇರುವುದಿಲ್ಲ. ಕೇವಲ 5 ಮಂದಿಯ 1 ತಂಡವಿರುತ್ತದೆ. ಇದರಲ್ಲಿ ಒಬ್ಬರು ಭಾಗವತರು, ಒಬ್ಬರು ಮದ್ದಳೆ, ಇನ್ನೊಬ್ಬರು ಶೃತಿ. ಮತ್ತಿಬ್ಬರು ವೇಷಧಾರಿಗಳು.
ಈ ವೇಷಧಾರಿಗಳು ಹೆಚ್ಚಾಗಿ ರಾಧಾ-ಕೃಷ್ಟ ಅಥವಾ ಕೃಷ್ಣ-ರುಕ್ಮಿಣಿ ವೇಷ ಧರಿಸುತ್ತಾರೆ. ಅಥವಾ ಶಿವ-ಪಾರ್ವತಿ, ರಾಮ-ಸೀತೆ ಮುಂತಾದ ವೇಷಗಳನ್ನು ಧರಿಸುವುದೂ ಇದೆ.
ಆಟ ಹೇಗಿರುತ್ತೆ?: ಈ ತಂಡಗಳು ಮನೆಮನೆಗೆ ಭೇಟಿ ಕೊಟ್ಟು ನಾಟ್ಯ ಮಾಡುವುದು ಪದ್ದತಿ. ಸಂಜೆಯ ವೇಳೆಗೆ ವೇಷದಾರಿಗಳು ವೇಷ ಧರಿಸಿ ಮನೆಮನೆಗೆ ಹೊರಡುತ್ತಾರೆ. ಪ್ರತಿ ಮನೆಯಲ್ಲೂ ಸುಮಾರು ಅರ್ಧ ಗಂಟೆ ಕಾಲ ಪ್ರದರ್ಶನ ನೀಡಲಾಗುತ್ತದೆ. 1 ರಾತ್ರಿಯಲ್ಲಿ ಸರಾಸರಿ 10 ಮನೆಗಳಿಗಷ್ಟೇ ಭೇಟಿ ನೀಡಲು ಸಾಧ್ಯ.
ಭಾಗವತರು 1 ಪಲ್ಲವಿ ಮತ್ತು 1 ಶೃತಿ ಪದ್ಯವನ್ನು ಹಾಡುತ್ತಾರೆ. ಈ ಹಾಡಿಗೆ ವೇಷಧಾರಿಗಳು ನಾಟ್ಯ ಮಾಡಿ ಪದ್ಯದ ಅರ್ಥ ಹೇಳುತ್ತಾರೆ. ಪದ್ಯಗಳು ವೇಷಕ್ಕೆ ಸಂಬಂಧಿಸಿದ್ದೇ ಇರುತ್ತದೆ. ಆಯಾ ಮನೆಗಳಲ್ಲಿ ಕೊಟ್ಟ ದುಡ್ಡು, ಅಕ್ಕಿ, ಬೇಳೆ ಮತ್ತಿತರ ದ್ರವ್ಯ-ವಸ್ತುಗಳೇ ಅವರ ಸಂಭಾವನೆ.
ಈಗ ಕಡಿಮೆಯಾಗಿದೆ: ಈ ತಂಡಗಳು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿವೆ. ಆದರೂ, ಕಾಸರಗೋಡು, ದಕ್ಷಿಣ ಕನ್ನಡದ ಕೆಲ ಭಾಗಗಳಲ್ಲಿ ಈಗಲೂ ಈ ತಂಡಗಳಿವೆ. ಬಹುತೇಕ ಕಲಾವಿದರು ಮೇಳಗಳನ್ನು ಕಟ್ಟಿಕೊಂಡು ವಿವಿಧ ಊರುಗಳಲ್ಲಿ 3 ಗಂಟೆಯ ಯಕ್ಷಗಾನ ಆಡುತ್ತಿರುವುದೂ ಈ ತಂಡಗಳು ಕಡಿಮೆಯಾಗಲು ಕಾರಣವಿರಬಹುದು.
ಲೇಖನ: ಕಾವ್ಯಶ್ರೀ