Sunday, May 3, 2009

ಬಲ್ಲಿರೇನಯ್ಯ: ಭಾಗವತರು

ಭಾಗವತರು- ಯಕ್ಷಗಾನದ ಮುಖ್ಯ ಸೂತ್ರಧಾರಿ. ಸಮಸ್ತ ಪ್ರಸಂಗ ಇವರ ನೇತೃತ್ವದಲ್ಲೇ
ನಡೆಯುವುದು. ಯಕ್ಷಗಾನ ಪದ್ಯವನ್ನು ರಾಗ ಸಮೇತ ಹಾಡುವುದು ಇವರ ಕೆಲಸ.
ಯಕ್ಷಗಾನದಲ್ಲಿ ಭಾಗವತರ ಕಾರ್ಯ ಇಷ್ಟಕ್ಕೇ ಸೀಮಿತಗೊಳ್ಳುವುದಿಲ್ಲ. ಒಬ್ಬ ಅರ್ಥಧಾರಿ, ಪದ್ಯದ
ಅರ್ಥವನ್ನು ಸಮರ್ಥವಾಗಿ ವ್ಯಾಖ್ಯಾನಿಸಲು ತಡವರಿಸಿದಲ್ಲಿ ಆತನನ್ನು ಆಪತ್ತಿನಿಂದ ಪಾರು
ಮಾಡುವುದೇ ಭಾಗವತರು.
ಭಾಗವತರ ಜ್ಞಾನ: ಯಾರೇ ಒಬ್ಬ ಯಕ್ಷಗಾನ ಕಲಾವಿದ( ಹಿಮ್ಮೇಳ, ಮುಮ್ಮೇಳ ಯಾವುದೇ ಇರಲಿ)
ಯಕ್ಷಗಾನದ ಸಮಸ್ತ ಆಯಾಮಗಳನ್ನೂ ತಿಳಿದಿರಬೇಕಾಗುತ್ತದೆ. ಅದರಲ್ಲೂ ಭಾಗವತರು
ಸೂತ್ರಧಾರಿಯಾಗಿರುವುದರಿಂದ ಕಡ್ಡಾಯವಾಗಿ ತಿಳಿದುಕೊಂಡಿರಬೇಕು. ಪ್ರಸಂಗದ ಸಂಪೂರ್ಣ ಜ್ಞಾನ
ಅವರಲ್ಲಿರಬೇಕು.
ತಾಳ, ರಾಗ ಶೃತಿ ಎಲ್ಲವನ್ನೂ ಸೂಕ್ತ ರೀತಿಯಲ್ಲಿ ಹೊಂದಿಸಿಕೊಂಡು ಹೋಗುವ ಕಲೆ ಅವರಿಗೆ
ಕರಗತವಾಗಿರಬೇಕು.
ಒಂದು ಪ್ರಸಂಗದ ಪದ್ಯ ಹಲವಾರು ರಾಗಗಳಿಂದ ಕೂಡಿರುತ್ತದೆ. (ರಾಗಗಳ ಬಗ್ಗೆ ಮುಂದಿನ ದಿನಗಳಲ್ಲಿ
ಪ್ರಕಟಿಸಲಾಗುವುದು.) ಈ ಎಲ್ಲಾ ರಾಗಗಳನ್ನು ಅಭ್ಯಸಿಸಿದರಷ್ಟೇ ಒಬ್ಬಾತ ಭಾಗವತ ಅನ್ನಿಸಿಕೊಳ್ಳಲು
ಸಾಧ್ಯ. ಕೇವಲ ರಾಗ ಗೊತ್ತಿದ್ದರಷ್ಟೇ ಸಾಲದು, ಯಾವ ಪದ್ಯಕ್ಕೆ ಯಾವ ರಾಗ ಎಂಬುದನ್ನೂ
ಅರಿತಿರಬೇಕು. ಅದೆಷ್ಟೋ ಪ್ರಸಂಗಗಳನ್ನು ಕಂಠಪಾಠ ಮಾಡಿದ ಭಾಗವತರೂ ಇದ್ದಾರೆ.
ಉದಾಹರಣೆಗೆ ಬಲಿಪ ನಾರಾಯಣ ಭಾಗವತರು 150ಕ್ಕೂ ಹೆಚ್ಚು ಪ್ರಸಂಗಗಳನ್ನು ಕಂಠಪಾಠ
ಮಾಡಿದ್ದಾರೆ.
ಭಾಗವತರ ವೇಷ ಭೂಷಣ: ಯಕ್ಷಗಾನದಲ್ಲಿ ವೇಷಧಾರಿಗಳಿಗೆ ಮಾತ್ರ ನಿರ್ದಿಷ್ಟ ವೇಷ
ಭೂಷಣಗಳಿರುವುದಲ್ಲ. ಹಿಮ್ಮೇಳದವರೂ ಸಾಂಪ್ರದಾಯಿಕ ಉಡುಗೆ ಧರಿಸುವುದು ಪದ್ಧತಿ. ಭಾಗವತರು
ಸೇರಿದಂತೆ ಎಲ್ಲಾ ಹಿಮ್ಮೇಳದವರು ಬಿಳಿ ಪಂಚೆ, ಅದಕ್ಕೊಪ್ಪುವ ಸಾಂಪ್ರದಾಯಿಕ ಅಂಗಿ (ಜುಬ್ಬಾ ಕೂಡ
ಆದೀತು.), ಹೆಗಲಿಗೊಂದು ಶಲ್ಯ, ತಲೆಗೆ ಕೆಂಪು ರುಮಾಲು ಧರಿಸಬೇಕು.
ಪ್ರಮುಖ ಭಾಗವತರು: ಯಕ್ಷಗಾನ ಕ್ಷೇತ್ರದಲ್ಲಿ ಹಲವಾರು ಭಾಗವತರು ಕೀರ್ತಿ ಶಿಖರ ಏರಿದ್ದಾರೆ,
ಹಲವಾರು ಮಂದಿ ಆ ಹಾದಿಯಲ್ಲಿದ್ದಾರೆ. ಇಲ್ಲಿ ಸಾಂದರ್ಭಿಕವಾಗಿ ಕೆಲವು ಹೆಸರುಗಳನ್ನಷ್ಟೇ
ಉಲ್ಲೇಖಿಸುತ್ತೇನೆ. ಹಾಗಂತ ಇಷ್ಟೇ ಮಂದಿ ಭಾಗವತರು ಇರುವುದು ಎಂದರ್ಥವಲ್ಲ. ಎಲ್ಲಾ ಭಾಗವತರ
ಬಗೆಗಿನ ವಿವರಗಳನ್ನು ಧೀಂಕಿಟ ಬಳಗ ಪ್ರಕಟಿಸುತ್ತದೆ.
1. ದಾಮೋದರ ಮಂಡೆಚ್ಚ
2. ಕಡತೋಕ ಮಂಜುನಾಥ ಭಾಗವತ
3. ಇರಾ ಗೋಪಾಲ ಕೃಷ್ಣ ಭಟ್ಟ
4. ಬಲಿಪ ನಾರಾಯಣ ಭಾಗವತ
5. ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ
6. ಪದ್ಯಾಣ ಗಣಪತಿ ಭಟ್ಟ
7. ಪುತ್ತಿಗೆ ರಘುರಾಮ ಹೊಳ್ಳ
8. ದಿನೇಶ ಅಮ್ಮಣ್ಣಾಯ
9. ಬಲಿಪ ಪ್ರಸಾದ ಭಟ್ಟ
10. ಗುಂಡ್ಮಿ ಕಾಳಿಂಗ ನಾವಡ ( ಭಾಗವತಿಕೆಗೆ ಆಧುನಿಕ ಸ್ಪರ್ಶ ನೀಡಿದವರು ಗುಂಡ್ಮಿ ಕಾಳಿಂಗ
ನಾವಡರು. ಭಾವಗೀತೆಗಳನ್ನೂ ಪ್ರಸಂಗಕ್ಕೆ ಅಳವಡಿಸಿ ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ
ನಾವಡರದ್ದು. ಚಿಕ್ಕ ವಯಸ್ಸಿನಲ್ಲೇ ಯಕ್ಷಗಾನ ಪ್ರವೇಶಿಸಿದ ಅವರು, ಅಷ್ಟೇ ಬೇಗ ಕೀರ್ತಿ ಶಿಖರ
ಏರಿದವರು.)
ಲೇಖನ: ಸಂಗೀತಾ ಪುತ್ತೂರು

2 comments:

ಸಂಗೀತಾ said...

ಪ್ರಕಾಶ್, ಗಣಪ ಕುಂಬ್ಳೆ,
ವಂದನೆಗಳು. ನಾನು ಕಳುಹಿಸಿದ್ದ ಮಾಹಿತಿ ಪ್ರಕಟಿಸಿದ್ದಕ್ಕೆ ಥ್ಯಾಂಕ್ಸ್. ಮುಂದೆಯೂ ನಾನು ಕಳುಹಿಸುವ ಲೇಖನಗಳಿಗೆ ಅವಕಾಶ ಕಲ್ಪಿಸುತ್ತೀರೆಂಬ ನಂಬಿಕೆ ನನ್ನದು. ಧೀಂಕಿಟಕ್ಕೆ ನನ್ನ ಕಾಂಟ್ರಿಬ್ಯೂಷನ್ ಮುಂದುವರಿಯುತ್ತದೆ.

Ganesh kumar from Bangalore said...

One of the good article....... keep it up.....