Sunday, August 2, 2009

ಅಕಟಕಟಾ: ಚಂಡ-ಮುಂಡರ ಚರ್ಚೆಯೇ?

ರಂಗಸ್ಥಳದ ಮೇಲೆ 2 ಪಾತ್ರಗಳು ಸಂಭಾಷಣೆ ನಡೆಸುವಾಗ ಆ ಪಾತ್ರಧಾರಿಗಳ ವೈಯಕ್ತಿಕ ವಿಚಾರವೂ
ಪ್ರಸಂಗಕ್ಕೆ ಸರಿಹೊಂದುವ ರೀತಿಯಲ್ಲಿ ಚರ್ಚೆಯಾಗುವುದುಂಟು. ಆದರೆ, ಇಂಥ ಸೂಕ್ಷ್ಮಗಳು ಪ್ರೇಕ್ಷಕನ
ಗಮನಕ್ಕೆ ಬರುವುದೇ ಇಲ್ಲ.( ಪಾತ್ರಧಾರಿಗಳ ವೈಯಕ್ತಿಕ ವಿಚಾರ ತಿಳಿದಿಲ್ಲ ಎಂದಾದರೆ ಮಾತ್ರ.) ಇಂಥ
ಒಂದು ಪ್ರಸಂಗ ನಮ್ಮ ಓದುಗರಿಗಾಗಿ....
ಅದು ದೇವಿಮಹಾತ್ಮೆ ಪ್ರಸಂಗ. ಚಂಡ-ಮುಂಡ, ಶುಂಭ-ನಿಶುಂಭ, ರಕ್ತಬೀಜಾದಿ ರಾಕ್ಷಸರ
ಸಂಹಾರಕ್ಕಾಗಿ ಮಹಾಮಾಯೆ ಶಾಂಭವೀ ರೂಪವನ್ನು ತಾಳಿ ವೃಂದಾವನದಲ್ಲಿ ನೆಲೆಸಿರುತ್ತಾಳೆ. ಶುಂಭ
ದೊರೆಯ ಆಜ್ಞೆಯಂತೆ ದೇವಿಯನ್ನು ಶುಂಭನನ್ನು ವರಿಸುವಂತೆ ಒಪ್ಪಿಸಿ ಕರೆತರುವುದಕ್ಕಾಗಿ
ಚಂಡ-ಮುಂಡರು ವೃಂದಾವನದತ್ತ ಸಾಗುತ್ತಾರೆ.
ಅಖಂಡ ಬ್ರಹ್ಮಚಾರಿಗಳೆಂದೇ ಖ್ಯಾತಿ ಪಡೆದ ಚಂಡ-ಮುಂಡರು ದೇವಿಯ ಅಂದ, ಲಾವಣ್ಯವನ್ನು ಕಂಡು
ಮೋಹಗೊಳ್ಳುತ್ತಾರೆ. ಅಷ್ಟುಮಾತ್ರವಲ್ಲ ತಾವೇ ಆಕೆಯನ್ನು ವರಿಸಬೇಕೆಂದು ವಾಂಛಿತರಾಗಿ ಬಂದ
ಕಾರ್ಯವನ್ನು ಮರೆಯುತ್ತಾರೆ. "ಆಕೆಯನ್ನು ನಾನು ಮದುವೆಯಾಗುವುದು" ಎಂದು ಇಬ್ಬರೂ
ವಾಗ್ಯುದ್ಧವನ್ನೇ ಆರಂಭಿಸುತ್ತಾರೆ. ಇದು ಪ್ರಸಂಗದ ಕಥೆ. ವಿಶೇಷ ಇರುವುದೇ ಚಂಡ-ಮುಂಡರ
ವಾಗ್ಯುದ್ಧದಲ್ಲಿ.
ಪ್ರಸಂಗದಲ್ಲಿ ಚಂಡ-ಮುಂಡರ ಪಾತ್ರದಲ್ಲಿದ್ದವರು ನಿಜ ಜೀವನದಲ್ಲಿ ಹಾವು-ಮುಂಗುಸಿ. ಅವರಲ್ಲೊಬ್ಬರು
(ವಿವಾಹಿತ) (ಮುಂಡನ ಪಾತ್ರಧಾರಿ) ಯುವತಿಯೋರ್ವಳೊಂದಿಗೆ (ಅವಿವಾಹಿತೆ- ಸ್ಪಷ್ಟವಾಗಲಿ ಎಂದು
ವಿವರಿಸಿದ್ದು.) ಸಂಬಂಧ ಹೊಂದಿದ್ದರು. ಅಥವಾ ಅವರಿಬ್ಬರ ನಡುವೆ ಸಮಾಜ ಸಂಬಂಧ ಕಲ್ಪಿಸಿತ್ತು
ಎಂದರೂ ಅಡ್ಡಿಯಿಲ್ಲ. ಈ ವಿಚಾರ ರಂಗಸ್ಥಳದಲ್ಲಿ ಚಂಡ-ಮುಂಡರ ವಾಗ್ಯುದ್ಧದಲ್ಲಿ ಬರಬೇಕೆ!
ಚಂಡ ಮಾತಿನ ಮಧ್ಯದಲ್ಲಿ "ಅಲ್ವಯ್ಯಾ...! ಪರಸಸ್ತ್ರೀಯನ್ನು ಬಯಸುತ್ತೀಯಲ್ಲವೇ? ನಿನಗೆ ಸಂಸ್ಕಾರ
ಅನ್ನುವುದು ಸ್ವಲ್ಪವಾದರೂ ಇದೆಯೆ?" ಎಂದ.
ಮುಂಡ ಸುಮ್ಮನಿರುತ್ತಾನೆಯೆ? "ಪರಸ್ತ್ರೀ ಅನ್ನುವುದು ಯಾರಿಗೆ? ಆಕೆಗೆ ಯಾವನಾದರೂ
ಪುರುಷನೊಂದಿಗೆ ವಿವಾಹವಾಗಿರಬೇಕು. ಆದರೆ, ಈಕೆಗೆ ವಿವಾಹವಾಗಿಲ್ಲ. ಈಕೆಯಿನ್ನೂ ಕುಮಾರಿ.
ಪರಸ್ತ್ರೀ ಹೇಗಾಗುತ್ತಾಳೆ?" ಎಂದು ಚಂಡನ ಬಾಯಿ ಮುಚ್ಚಿಸಿದ....!

No comments: