Sunday, August 9, 2009

ಪ್ರಸಂಗದ ಸುತ್ತ: ಬ್ರಹ್ಮಕಪಾಲ

ಬ್ರಹ್ಮಕಪಾಲ ಅಂದರೆ ಬ್ರಹ್ಮನ ಶಿರಸ್ಸು. ಅದರಲ್ಲೇನು ವಿಶೇಷ? ಎಲ್ಲರಿಗೂ ಇರುವಂತೆ ಅವನಿಗೂ 1
ತಲೆಯಿದೆ ಅಂತ ಸುಮ್ಮನಾಗಬೇಡಿ. ಬ್ರಹ್ಮ ಚತುರ್ಮುಖಿ (4 ತಲೆಯವ). ಬ್ರಹ್ಮಕಪಾಲ ಆತನ 5ನೇ
ತಲೆ. ಈ ತಲೆಯದ್ದು ವಿಶೇಷ ಕತೆ.
ಸತ್ಯಲೋಕದಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಲಾಗುತ್ತದೆ. ಇದಕ್ಕೆ ಕಾಮದೇವ
ಮನ್ಮಥ ಮತ್ತು ಲಯಕರ್ತ ಪರಮೇಶ್ವರನನ್ನು ಹೊರತುಪಡಿಸಿ ಉಳಿದವರೆಲ್ಲರಿಗೂ ಆಹ್ವಾನ
ಹೋಗುತ್ತದೆ. ಇವರಿಬ್ಬರನ್ನೂ ಬ್ರಹ್ಮ ಉದ್ದೇಶಪೂರ್ವಕ ಕಡೆಗಣಿಸಿರುತ್ತಾನೆ.
ವಿಷಯ ತಿಳಿನ ಮನ್ಮಥ ಮತ್ತು ಪರಮೇಶ್ವರ ಸತ್ಯಲೋಕದತ್ತ ತೆರಳುತ್ತಾರೆ. ಮೊದಲು ಮನ್ಮಥ ಬಂದ.
ಆ ಸಮಯದಲ್ಲಿ ಬ್ರಹ್ಮ ಮತ್ತು ಆತನ ಮಾನಸಪುತ್ರಿ ಸರಸ್ವತಿ ಸಂಭಾಷಣೆಯಲ್ಲಿ ತೊಡಗಿರುತ್ತಾರೆ.
ಬ್ರಹ್ಮ- ಮಗಳೇ, ನೀನು ಪ್ರಾಪ್ತ ವಯಸ್ಕಳಾಗಿದ್ದಿ. ನಿನ್ನನ್ನು ಒಬ್ಬ ಯೋಗ್ಯ ವರನಿಗೆ ಕೊಟ್ಟು ಮದುವೆ
ಮಾಡಬೇಕೆಂದಿದ್ದೇನೆ.
ಸರಸ್ವತಿ- ನಿನಗೆ ವಿವಾಹ ವಯಸ್ಸು ಮೀರಿದ್ದರೂ ಮದುವೆಯಾಗಿಲ್ಲವಲ್ಲ. ನೀನು ಯಾರನ್ನಾದರೂ
ಮದುವೆ ಮಾಡಿಕೊ. ಆಮೇಲೆ ನಾನು ಮದುವೆಯಾಗುತ್ತೇನೆ.
ಈ ಸಂಭಾಷಣೆ ಕೇಳಿಸಿಕೊಂಡ ಮನ್ಮಥ ಇಬ್ಬರ ಮೇಲೂ ಪುಷ್ಪಶರಗಳನ್ನು ಪ್ರಯೋಗಿಸುತ್ತಾನೆ.ಇದನ್ನರಿಯದ ಬ್ರಹ್ಮ...
ಬ್ರಹ್ಮ- ಮಗಳೇ ನಿನಗೆ ಎಂಥ ವರ ಬೇಕು?
ಸರಸ್ವತಿ- ಆತ ನಿನ್ನಂತೆಯೇ ಇರಬೇಕು.
ಬ್ರಹ್ಮ- ನನ್ನ ಪತ್ನಿಯೂ ನಿನ್ನಂತೆಯೇ ಇರಬೇಕೆಂಬುದು ನನ್ನ ಅಪೇಕ್ಷೆ. ಹಾಗಿದ್ದರೆ ನಾವಿಬ್ಬರೂ
ಮದುವೆಯಾಗಬಹುದಲ್ಲ..... ಈ ರೀತಿ ಸರಸ್ವತಿಯ ಪಾಣಿಗ್ರಹಣ ಮಾಡುತ್ತಾನೆ ಬ್ರಹ್ಮ.
ಅಲ್ಲಿಗೆ ಬಂದ ಪರಮೇಶ್ವರ ಇದನ್ನು ವಿರೋಧಿಸುತ್ತಾನೆ. "ಸರಸ್ವತಿ ನಿನ್ನ ಮಗಳು. ಆಕೆಯನ್ನು ನೀನು
ಹೇಗೆ ವಿವಾಹವಾಗುತ್ತಿ?" ಎಂದು ಪ್ರಶ್ನಿಸುತ್ತಾನೆ.
"ನನಗೆ ಬುದ್ಧಿ ಹೇಳಲು ನಿನ್ನಲ್ಲೇನು ಹೆಚ್ಚಿದೆ?" ಎಂದು ಬ್ರಹ್ಮ ಸವಾಲೆಸೆಯುತ್ತಾನೆ. ಹೀಗೆ ಚರ್ಚೆ
ಆರಂಭವಾಗಿ 1 ಹಂತದಲ್ಲಿ ಶಿವ "ನನ್ನಲ್ಲಿ 5 ತಲೆಯಿದೆ. ನಿನ್ನಲ್ಲಿ ನಾಲ್ಕೇ ಇರುವುದು. ನಾನು 5
ತಲೆಗಳಿಂದ ಯೋಚಿಸಬಲ್ಲೆ. ಹಾಗಾಗಿ ನಾನು ಹೇಳಿದ್ದು ಕೇಳು" ಎನ್ನುತ್ತಾನೆ.
ಇದು ಚತುರ್ಮುಖಿ ಬ್ರಹ್ಮನಿಗೆ ಭಾರೀ ಸವಾಲಾಗಿ ಆತ "ನಾನು ಸೃಷ್ಟಿಕರ್ತ. ಇನ್ನೊಂದು ಸೃಷ್ಟಿಸಬಲ್ಲೆ"
ಎಂದು 5ನೇ ತಲೆ ಸೃಷ್ಟಿಸುತ್ತಾನೆ. ಇದುವೇ ಬ್ರಹ್ಮಕಪಾಲ. ಶಿವ ಇದನ್ನು ತನ್ನ ಕೈಯಿಂದ ಕೀಳುತ್ತಾನೆ.
ಬ್ರಹ್ಮಕಪಾಲ ಶಿವನ ಬೆರಳನ್ನು ಕಚ್ಚಿ ಹಿಡಿದುಕೊಂಡು ರಕ್ತ ಹೀರಲಾರಂಭಿಸುತ್ತದೆ.
ಅದರಿಂದ ಬಿಡಿಸಿಕೊಳ್ಳಲಾಗದೆ ಊರೂರು ಸುತ್ತಿದ ಶಿವ ಕೊನೆಗೆ ವಿಷ್ಣುವಿನ ಬಳಿ ಬರುತ್ತಾನೆ. ವಿಷ್ಣು
"ಶಿವನ ಮೈಯಲ್ಲಿರುವ ರಕ್ತ ಇಂಗಿದೆ. ಬಾ ನನ್ನ ರಕ್ತ ಹೀರು" ಎಂದು ಬ್ರಹ್ಮಕಪಾಲವನ್ನು
ಆಹ್ವಾನಿಸುತ್ತಾನೆ. ಬ್ರಹ್ಮಕಪಾಲ ಶಿವನನ್ನು ಬಿಟ್ಟು ವಿಷ್ಣುವಿನತ್ತ ನುಗ್ಗುತ್ತದೆ. ಶಿವ ತಪ್ಪಿಸಿಕೊಳ್ಳುತ್ತಾನೆ.
ವಿಷ್ಣು ಬ್ರಹ್ಮಕಪಾಲವನ್ನು ಅತ್ತಿಂದಿತ್ತ ಅಲೆದಾಡಿಸಿ ಕೊನೆಗೆ "ದ್ವಾಪರಯುಗದಲ್ಲಿ ಮಹಾಯುದ್ಧ
ನಡೆಯಲಿದೆ. ಆಗ ನಿನಗೆ ರಕ್ತತರ್ಪಣ ನೀಡುತ್ತೇನೆ. ಅಲ್ಲಿಯವರೆಗೆ ತಾಳ್ಮೆಯಿಂದಿರು" ಎಂದು ಮನವಿ
ಮಾಡುತ್ತಾನೆ. ಬ್ರಹ್ಮಕಪಾಲ ಒಪ್ಪುತ್ತದೆ.
ಮಹಾಭಾರತ ಯುದ್ಧದಲ್ಲಿ ಈ ಬ್ರಹ್ಮಕಪಾಲಕ್ಕೆ ಕೃಷ್ಣನಾಗಿ ಅವತರಿಸಿದ್ದ ವಿಷ್ಣು ರಕ್ತತರ್ಪಣ ನೀಡುತ್ತಾನೆ.

No comments: