Sunday, June 14, 2009
ಪ್ರಸಂಗದ ಸುತ್ತ: ಮಹಿಷಾಸುರ ಮರ್ದಿನಿ
ವಿದ್ಯುನ್ಮಾಲಿ ಮತ್ತು ಮಾಲಿನಿ ರಾಕ್ಷಸ ದಂಪತಿಗೆ ಬಹುಕಾಲ ಮಕ್ಕಳಿರಲಿಲ್ಲ. ಹೇಗಾದರೂ ಪುತ್ರಪ್ರಾಪ್ತಿಯಾಗಲೇಬೇಕೆಂದು ನಿರ್ಧರಿಸಿದ ಮಾಲಿನಿ ತಪಸ್ಸನ್ನಾಚರಿಸಲು ನಿರ್ಧರಿಸುತ್ತಾಳೆ. ಕಾಡಿಗೆ ತೆರಳಿ ಮಹಿಷಿ ಅಂದರೆ ಎಮ್ಮೆಯ ರೂಪದಲ್ಲಿ ತಪಸ್ಸಿಗೆ ತೊಡಗುತ್ತಾಳೆ.
ಆಕೆಯ ಕಠೋರ ತಪಸ್ಸಿನಿಂದ ಹೊಮ್ಮುವ ಶಾಖ ಋಷಿಯೊಬ್ಬನ ತಪಸ್ಸಿಗೆ ಭಂಗ ತರುತ್ತದೆ. ಇದರಿಂದ ಕೋಪಾವಿಷ್ಠನಾದ ಋಷಿ ಜ್ಞಾನದೃಷ್ಟಿಯಿಂದ ಮಾಲಿನಿ ತಪಸ್ಸನ್ನಾಚರಿಸುವುದನ್ನು ತಿಳಿದುಕೊಳ್ಳುತ್ತಾನೆ. "ಮಹಿಷಿಯ ರೂಪದಲ್ಲಿ ತಪಸ್ಸಾನಚರಿಸುತ್ತಿರುವುದರಿಂದ ನಿನ್ನ ಹೊಟ್ಟೆಯಲ್ಲಿ ಮಹಿಷ ಅಂದರೆ ಕೋಣವೇ ಜನ್ಮತಾಳಲಿ" ಎಂದು ಶಪಿಸುತ್ತಾನೆ.
ಇದರ ಫಲವೇ ಮಹಿಷಾಸುರನ ಜನನ. ಮಹಿಷಾಸುರ ಬೆಳಯುತ್ತಿದ್ದ. ಒಮ್ಮೆ ವಿದ್ಯುನ್ಮಾಲಿ ದೇವೇಂದ್ರನ ಮೇಲೆ ಯುದ್ಧ ಸಾರುತ್ತಾನೆ. ಯುದ್ಧದಲ್ಲಿ ವಿದ್ಯುನ್ಮಾಲಿಯ ಸೇನೆ ಸೋತು, ಆತ ಸಾವನ್ನಪ್ಪುತ್ತಾನೆ. ಇದರ ಸೇಡು ತೀರಿಸಿಕೊಳ್ಳಲು ಬಾಲಕ ಮಹಿಷ ಹೊರಟಾಗ ಮಾಲಿನಿ ತಡೆದು, ತಪಸ್ಸನ್ನಾಚರಿಸಿ ಶಕ್ತಿ ಸಂಪಾದಿಸಿಕೊಳ್ಳುವಂತೆ ಮಹಿಷನಿಗೆ ಸೂಚಿಸುತ್ತಾಳೆ.
ಅದರಂತೆ ತಪಸ್ಸನ್ನಾಚರಿಸಿ ಸಿಂಹವನ್ನು ಪಳಗಿಸಬಲ್ಲ ಹೆಣ್ಣಿನ ಹೊರತಾಗಿ ಬೇರಾರಿಂದಲೂ ಸಾವು ಬಾರದಂತಹ ವರ ಪಡೆಯುತ್ತಾನೆ. ವರಬಲದಿಂದ ಕೊಬ್ಬಿದ ಮಹಿಷ ದೇವಾದಿ ದೇವತೆಗಳನ್ನು ಸೋಲಿಸುತ್ತಾರೆ. ದೇವತೆಗಳು ಯಥಾಪ್ರಕಾರ ತ್ರಿಮೂರ್ತಿಗಳ ಮೊರೆ ಹೋಗುತ್ತಾರೆ. ತ್ರಿಮೂರ್ತಿಗಳು ಆದಿಮಾಯೆಯನ್ನು ಸ್ತುತಿಸಲು ಸೂಚಿಸುತ್ತಾರೆ.
ಸಿಂಹವಾಹಿನಿಯಾಗಿ ಪ್ರಕಟಗೊಳ್ಳುವ ಆದಿಮಾಯೆ ಮಹಿಷಾಸುರನನ್ನು ಕೊನೆಗಾಣಿಸುತ್ತಾಳೆ. ಅಲ್ಲಿಂದ ತರುವಾಯ ಆಕೆ, ಮಹಿಷಾಸುರಮರ್ದಿನಿಯಾಗಿ ಭಕ್ತರ ಹೃದಯಮಂದಿರದಲ್ಲಿ ನೆಲೆಸುತ್ತಾಳೆ.
ಇದು ಮಹಿಷಾಸುರಮರ್ದಿನಿ ಪ್ರಸಂಗ. ಇದನ್ನು ಆಡಲು ಕನಿಷ್ಠ 3 ಗಂಟೆಯಾದರೂ ಬೇಕು.
ಲೇಖನ: ಸಂಗೀತಾ ಪುತ್ತೂರು
Sunday, June 7, 2009
ಅಕಟಕಟಾ: ಸ್ತ್ರೀಪಾತ್ರಧಾರಿಗೆ ಲೇಡಿ ಸೆಕ್ಯೂರಿಟಿ!!!!
ಪೊಲೀಸರೇ ಬಂದರೆ ಹೇಗಾದೀತು?
ತಮಾಷೆಯಲ್ಲ. ಈ ಪ್ರಸಂಗ ನಡೆದದ್ದು, ಪ್ರಸಂಗ ತೆಂಕು-ಬಡಗು ತಿಟ್ಟುಗಳೆರಡರಲ್ಲೂ ಸಮರ್ಥವಾಗಿ
ಪಾತ್ರಪೋಷಣೆ ಮಾಡಿದ ಸೀಮಾತೀತ ಕಲಾವಿದ ಬೇಗಾರು ಶಿವಕುಮಾರ್ ಅವರ ಬದುಕಿನಲ್ಲಿ.
(ಬೇಗಾರು ಅವರ ವೃತ್ತಿ, ಪ್ರವೃತ್ತಿ ಮತ್ತಿತರ ವಿಚಾರಗಳ ಬಗೆಗಿನ ಲೇಖನಗಳನ್ನು ಮುಂದಿನ ದಿನಗಳಲ್ಲಿ
ಪ್ರಕಟಿಸಲಾಗುವುದು.)
1991ರಲ್ಲಿ ನವದೆಹಲಿಯಲ್ಲಿ "ಫೂಲ್ ವಾಲೋಂಕಿ ಫೇರ್" ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ರಸಿದ್ಧ ಸ್ತ್ರೀ ವೇಷಧಾರಿ ಬೇಗಾರು ಶಿವಕುಮಾರ್ ಅವರೂ ಇದರಲ್ಲಿ ಭಾಗವಹಿಸಿದ್ದರು.
ಭಾಗವಹಿಸಿದ್ದ ಎಲ್ಲಾ ಕಲಾವಿದರಿಗೂ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಭದ್ರತಾ ತಪಸಣೆಯಂತೂ
ಇದ್ದದ್ದೇ... ಬೇಗಾರು ಸ್ತ್ರೀವೇಷ ಧರಿಸಿ ಸಮಾರಂಭದ ವೇದಿಕೆತ್ತ ಹೆಜ್ಜೆ ಹಾಕುತ್ತಿದ್ದಂತೆ ಅವರ ಜೊತೆ
ಜೊತೆಗೆ ಲೇಡಿ ಪೊಲೀಸರೂ ಆಗಮಿಸಿದರು. ಬೇಗಾರು ಅವರ ರಕ್ಷಣೆಗೆ. ಬೇಗಾರು ಅವರಿಗೆ ಗೊಂದಲ.
ಇವರೇಕೆ ತಮಗೆ ರಕ್ಷಣೆ ನೀಡುತ್ತಿದ್ದಾರೆ?
ಸಮಾರಂಭದ ವೇದಿಕೆ ಬಳಿ ಬಂದಾಗ ಭದ್ರತಾ ತಪಾಸಣೆಗೂ ಲೇಡಿ ಪೊಲೀಸರೇ ಆಗಮಿಸಿದರು.
ಬೇಗಾರು ಅವರ ಮನದಲ್ಲಿ "ಎಡವಟ್ಟಾಯ್ತಲ್ಲ..." ಎಂಬ ಭಾವ. ತಕ್ಷಣವೇ ಅಲ್ಲಿಗೆ ಬಂದ ಸಮಾರಂಭದ
ಆಯೋಜಕರು "ಯೇ ಔರತ್ ನಹೀ... ಆದಮೀ ಹೈ" ಎಂದಾಗ ಲೇಡಿ ಪೊಲೀಸರಿಗೆ ಅಚ್ಚರಿ.
ಸಮಾರಂಭದಲ್ಲಿ ನೆರೆದವರೆಲ್ಲ ಕಕ್ಕಾಬಿಕ್ಕಿ.
(ಈ ಘಟನೆಯನ್ನು ಸ್ವತಃ ಬೇಗಾರು ಶಿವಕುಮಾರ್ ಅವರೇ ಧೀಂಕಿಟ ಬಳಗದ ಜೊತೆ
ಹಂಚಿಕೊಂಡಿದ್ದಾರೆ. ಯಕ್ಷಗಾನ ಕಲೆಯನ್ನೇ ಉಸಿರಾಗಿಸಿಕೊಂಡ ಬೇಗಾರು ಅವರು ಧೀಂಕಿಟಕ್ಕೆ
ನೀಡುತ್ತಿರುವ ಸಹಕಾರಕ್ಕೆ ನಾವು ಆಭಾರಿ.)
Sunday, May 31, 2009
ಬಲ್ಲಿರೇನಯ್ಯ: ಚೆಂಡೆ ವಾದಕರು
ಚೆಂಡೆಯನ್ನು ನುಡಿಸುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಚೆಂಡೆ ವಾದಕರೂ ಸಾಕಷ್ಟು ಅಧ್ಯಯನ
ಮಾಡಬೇಕು.
ತೆಂಕುತಿಟ್ಟಿನ ಚೆಂಡೆಯನ್ನು ನಿಂತುಕೊಂಡು ಬಾರಿಸಲಾಗುತ್ತದೆ, ಚೆಂಡೆಯ ಎರಡೂ ಬದಿಯ ಅಗಲ
ಒಂದೇ. ತೆಂಕಿನ ಚೆಂಡೆ ನುಡಿಸುವುದು ಅಷ್ಟು ಸುಲಭವಲ್ಲ. ಹೆಗಲಿಗೇರಿಸಿಕೊಂಡು ಚೆಂಡೆಕೋಲಿನಿಂದ
ಚೆಂಡೆಗೆ ಬಾರಿಸಿದ ಮಾತ್ರಕ್ಕೆ ಅದರಿಂದ ಸ್ವರ ಹೊರಡುವುದಿಲ್ಲ.
ಚೆಂಡೆ ವಾದಕರು ರಾಗ ತಾಳಗಳ ಸ್ಪಷ್ಟ ಜ್ಞಾನ ಹೊಂದಿರಬೇಕು. ಎಲ್ಲೆಲ್ಲಿ ಯಾವ್ಯಾವುದು
ಬಳಸಬೇಕೆಂಬುದೂ ಅರಿವಿರಬೇಕು. ಇಲ್ಲವಾದಲ್ಲಿ ಚೆಂಡೆ ವಾದಕ ಸೋಲುವುದು ಖಂಡಿತ.
ಹಲವಾರು ಚೆಂಡೆವಾದಕರು ಯಕ್ಷಗಾನ ಕ್ಷೇತ್ರದಲ್ಲಿ ಮಿಂಚಿದ್ದಾರೆ. ಈಗಲೂ ಮಿಂಚುತ್ತಿರುವವರು
ಸಾಕಷ್ಟು ಮಂದಿ. ಇಹಲೋಕ ತ್ಯಜಿಸಿದರೂ ತಮ್ಮ ಪ್ರಭಾವವನ್ನು ಉಳಿಸಿರುವವರು ಬಹಳಷ್ಟು ಮಂದಿ
ಇದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಇತ್ತೀಚೆಗಷ್ಟೇ ನಿಧನರಾದ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು.
ಕೆಲವು ಚೆಂಡೆವಾದಕರು: ಯಕ್ಷಗಾನ ಕ್ಷೇತ್ರದಲ್ಲಿ ಚೆಂಡೆವಾದಕರು ಬಹಳಷ್ಟು ಮಂದಿ ಇದ್ದಾರೆ. ಎಲ್ಲರ
ಹೆಸರನ್ನೂ ಉಲ್ಲೇಖಿಸುವುದು ಕಷ್ಟ. ಹಾಗಾಗಿ, ಸಂದರ್ಭಕ್ಕೆ ಅನುಗುಣವಾಗಿ ಕೆಲವು ಹೆಸರುಗಳನ್ನಷ್ಟೇ
ಪ್ರಸ್ತಾಪಿಸುತ್ತೇನೆ. ಎಲ್ಲಾ ಕಲಾವಿದರ ಬಗೆಗಿನ ಬರೆಹಗಳನ್ನೂ ಮುಂದಿನ ದಿನಗಳಲ್ಲಿ ಧೀಂಕಿಟದಲ್ಲಿ
ಓದಬಹುದು.
ಪ್ರಮುಖರು:
1. ಚಿಪ್ಪಾರು ಕೃಷ್ಣಯ್ಯ ಬಲ್ಲಾಳ
2.ಪದ್ಯಾಣ ಶಂಕರನಾರಾಯಣ ಭಟ್ಟ
3.ಆಡೂರು ಗಣೇಶ ರಾವ್
4.ದೇನಂತಮಜಲು ಸುಬ್ರಹ್ಮಣ್ಯ ಭಟ್ಟ
ಬರೆಹ: ಕಾರ್ತಿಕ್ ನಿಡ್ಲೆ
Sunday, May 24, 2009
ರಂಗಾಂತರಂಗ: ಹೊಸನಗರ ಮೇಳ

ಶ್ರೀರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಈ ಮೇಳಕ್ಕೆ ಉಜಿರೆ
ಅಶೋಕ್ ಭಟ್ ವ್ಯವಸ್ಥಾಪಕರಾಗಿದ್ದಾರೆ.
ಪೌರಾಣಿಕ ಪ್ರಸಂಗಗಳನ್ನು ಸಮರ್ಥವಾಗಿ ಆಡುವವರು ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲೇ ಜನ್ಮ
ತಳೆದ ಈ ಮೇಳ ಪೌರಾಣಿಕ ಜ್ಞಾನ ಹೊಂದಿರುವ ಹಲವಾರು ಕಲಾವಿದರನ್ನು ಒಳಗೊಂಡಿದೆ. ಹೀಗಾಗಿ,
ಪೌರಾಣಿಕ ಪ್ರಸಂಗಗಳನ್ನು ಆಡುವವರಿಲ್ಲ ಎಂಬ ಕೊರಗನ್ನು ಇದು ನಿವಾರಿಸಿದೆ.
ಪದ್ಯಾಣ ಗಣಪತಿ ಭಟ್ (ಭಾಗವತರು) ಮತ್ತಿತರ ಹಿಮ್ಮೇಳ ಕಲಾವಿದರ ತಂಡ ಮೇಳಕ್ಕೆ ಮೆರುಗು
ನೀಡಿದೆ. ಹಲವಾರು ಹಿರಿ-ಕಿರಿಯ (ಎಲ್ಲಾ ಹೆಸರುಗಳನ್ನೂ ಇಲ್ಲಿ ಉಲ್ಲೇಖಿಸುವುದ ಕಷ್ಟ. ಹೀಗಾಗಿ
ಮೇಳದ ಕಲಾವಿದರ ಬಗೆಗೆ ಮುಂದಿನ ದಿನಗಳಲ್ಲಿ ಬರೆಯಲಾಗುವುದು.) ಕಲಾವಿದರು ಮುಮ್ಮೇಳವನ್ನು
ಬೆಳಗುತ್ತಿದ್ದಾರೆ.
ಈಗಾಗಲೇ ನಾಡಿನೆಲ್ಲೆಡೆ ತನ್ನ ಛಾಪು ಬೀರಿರುವ ಹೊಸನಗರ ಮೇಳ, ರಾಘವೇಶ್ವರ ಶ್ರೀಗಳ
ನೇತೃತ್ವದಲ್ಲಿ ತನ್ನ ಯಶಸ್ಸನ್ನು ಮುಂದುವರಿಸಿಕೊಂಡು ಹೋಗಲಿ ಎಂಬುದು ಕಲಾಪ್ರೇಮಿಗಳ ಆಶಯ.
ಜೈ ಗುರುದೇವ.
ಲೇಖನ: ಸಂಗೀತಾ ಪುತ್ತೂರು
Sunday, May 17, 2009
ಪ್ರಸಂಗದ ಸುತ್ತ: ಮಧು-ಕೈಟಭ ವಧೆ
ಮಧು-ಕೈಟಭ ವಧೆ ದೇವಿ ಮಹಾತ್ಮೆಯ ಉಪಪ್ರಸಂಗ. ದೇವಿಮಹಾತ್ಮೆಯ ಆರಂಭದಲ್ಲೇ
ಮಧು-ಕೈಟಭರ ವಧೆ ಬರುತ್ತದೆ.
ಸೃಷ್ಟಿಯ ಆದಿಯಲ್ಲಿ ಭೂಮಿ ಎಂಬುದೇ ಇರುವುದಿಲ್ಲ. ಈ ಪ್ರಸಂಗದಲ್ಲಿ ತ್ರಿಮೂರ್ತಿಗಳಲ್ಲಿ
ದೊಡ್ಡವರಾರೆಂಬ ವಾಗ್ಯುದ್ಧ ನಡೆಯುವುದು ಮತ್ತು ಮಧು-ಕೈಟಭರ ಜನನವಾಗುವಲ್ಲಿಯವರೆಗೆ
ದೇವಿಮಹಾತ್ಮೆ ಪ್ರಸಂಗದಲ್ಲೇ ವಿವರಿಸಲಾಗಿದೆ. ಹೀಗಾಗಿ ಅದನ್ನು ಮತ್ತೆ ವಿವರಿಸಲು ಹೋಗುವುದಿಲ್ಲ.
ಮಲಗಿದ್ದ ವಿಷ್ಣು ತನ್ನ ಕಿವಿಯಿಂದ ಕಲ್ಮಶ (ವ್ಯಾಕ್ಸ್) ಅನ್ನು ತೆಗೆದೆಸೆದಾಗ ಅದರಿಂದ ಮಧು-ಕೈಟಭರು
ಹುಟ್ಟಿಕೊಳ್ಳುತ್ತಾರೆ. ಸಾಮಾನ್ಯವಾಗಿ ಎಲ್ಲರಲ್ಲೂ ಇರುವ ತಪ್ಪು ಭಾವನೆ ಎಂದರೆ ಮಧು-ಕೈಟಭರು
ರಾಕ್ಷಸರು ಎಂಬುದು. ಆದರೆ, ಅವರು ರಾಕ್ಷಸರಲ್ಲ. ವಿಷ್ಣುವೇ ಅವರ ಅಪ್ಪ.
ಹಸಿವಿನಿಂದ ಕಂಗೆಟ್ಟ ಮಧು-ಕೈಟಭರು ಬ್ರಹ್ಮನನ್ನು ತಿನ್ನಲು ಮುಂದಾದಾಗ ಬ್ರಹ್ಮ ವಿಷ್ಣುವನ್ನು
ಪ್ರಾರ್ಥಿಸುತ್ತಾನೆ. ಬ್ರಹ್ಮನನ್ನು ರಕ್ಷಿಸಲೋಸುಗ ವಿಷ್ಣು ಮಧು-ಕೈಟಭರೊಂದಿಗೆ ಯುದ್ಧ ಆರಂಭಿಸುತ್ತಾನೆ.
ವಿಷ್ಣು ಒಬ್ಬ, ಮಧು-ಕೈಟಭರು ಇಬ್ಬರು. ಮಧುವಿಗೆ ಸುಸ್ತಾದಾಗ ಕೈಟಭ, ಕೈಟಭನಿಗೆ ಸುಸ್ತಾದಾಗ
ಮಧು ಎಂದು ಪಾಳಿಯಲ್ಲಿ ಯುದ್ಧ ಮುಂದುವರಿಸುತ್ತಾರೆ.
ವಿಷ್ಣು ಒಬ್ಬನೇ ಸೆಣಸುತ್ತಾ ಒಂದು ಹಂತದಲ್ಲಿ ಸೋಲಿನ ಭೀತಿಯನ್ನು ಎದುರಿಸುತ್ತಾನೆ. ದಿಕ್ಕು ತೋಚದೆ
ಆದಿ ಮಾಯೆಯನ್ನು ಸ್ತುತಿಸುತ್ತಾನೆ. ಆದಿಮಾಯೆ ಆಕಾಶದಲ್ಲಿ ಮಾಯೆಯ ರೂಪದಲ್ಲಿ ಕಾಣಿಸಿಕೊಂಡು
ಮಧು-ಕೈಟಭರಲ್ಲಿ ಚಂಚಲತೆ ಮೂಡಿಸುತ್ತಾಳೆ. ಯುದ್ಧದಲ್ಲಿ ಇರಬೇಕಾದ ಏಕಾಗ್ರತೆ ತಪ್ಪಿ ಹೋಗುತ್ತದೆ.
ಆಗ ವಿಷ್ಣು ಅವರನ್ನು ಘಾಸಿಗೊಳಿಸುತ್ತಾನೆ.
ಸಾವಿನ ನೋವಲ್ಲಿ ನರಳುತ್ತಿದ್ದ ಮಧು-ಕೈಟಭರಿಗೆ ಜನ್ಮ ರಹಸ್ಯವನ್ನು ತಿಳಿಸಿ ಅನುಗ್ರಹಿಸುತ್ತಾನೆ. ಸಾವು
ಬಂತೆಂದು ನೀವು ಮರುಗಬೇಕಿಲ್ಲ. ಲೋಕದ ಸೃಷ್ಟಿಗಾಗಿ ನಿಮ್ಮ ಕೊಡುಗೆ ಅಗತ್ಯವಿತ್ತು ಎಂದು ಅವರ
ಚರ್ಮದಿಂದ ಭೂಮಿಯನ್ನು ನಿರ್ಮಿಸುತ್ತಾನೆ.
ಬರೆಹ: ದಿವ್ಯಶ್ರೀ ಬದಿಯಡ್ಕ
Sunday, May 10, 2009
ಅಕಟಕಟಾ...!: 40 ಮೀಟರ್ ಹಾರಬಲ್ಲೆ...!
ಇಂಥ ಅಚಾತುರ್ಯಗಳು ನಡೆದಾಗ ಸಹಕಲಾವಿದರು ಅದನ್ನು ಸರಿಪಡಿಸಿಕೊಂಡು ಹೋಗುತ್ತಾರೆ.
ಹಾಸ್ಯ ಕಲಾವಿದರಾದರೆ ಕೇಳುವುದೇ ಬೇಡ. ನಗೆಬುಗ್ಗೆ ಚಿಮ್ಮಿಸಿ ಬಿಡುತ್ತಾರೆ.
ಅದರಲ್ಲೂ ಹೊಸದಾಗಿ ರಂಗಪ್ರವೇಶ ಮಾಡುವವರಿಗೆ ಬಾಯ್ತಪ್ಪುವುದು ಜಾಸ್ತಿ. ಒಂದು ಬಾರಿ ಹೀಗೇ
ಆಗಿತ್ತು.
ಆಗಷ್ಟೇ ಯಕ್ಷಗಾನ ನಾಟ್ಯ, ಅರ್ಥಗಾರಿಕೆ ಕಲಿತು ರಂಗಪ್ರವೇಶ ಮಾಡುತ್ತಿದ್ದ ಹುಡುಗ. ಪ್ರಸಂಗ
ಸಮುದ್ರಲಂಘನ (ರಾಮಾಯಣದ ಉಪಪ್ರಸಂಗ).
ಸುಗ್ರೀವ ವಾನರ, ಭಲ್ಲೂಕ ಸೇನೆಯನ್ನು 4 ವಿಭಾಗ ಮಾಡಿ 4 ದಿಕ್ಕುಗಳಿಗೆ ಕಳುಹಿಸುತ್ತಾನೆ. ಇದರಲ್ಲಿ
ದಕ್ಷಿಣದತ್ತ ಹೊರಟ ಸೇನೆಗೆ ಸೀತೆ ಲಂಕೆಯಲ್ಲಿರುವ ವಿಚಾರ ತಿಳಿದುಬರುತ್ತದೆ. ಲಂಕೆಯಲ್ಲಿ ಸೀತೆ
ಇದ್ದಾಳೋ? ಇಲ್ಲವೋ? ಎಂಬುದನ್ನು ತಿಳಿಯಲು ಅಲ್ಲಿಗೇ ಹೋಗಬೇಕು. ಆಗ ಜಾಂಬವಂತ ಎಲ್ಲರನ್ನೂ
ನೀವೆಷ್ಟು ದೂರ ಹಾರಬಲ್ಲಿರಿ? ಎಂದು ಕೇಳುತ್ತಾನೆ.
ನಮ್ಮ ಹುಡುಗ ಅಂಗದನ ಪಾತ್ರಧಾರಿ. ಜಾಂಬವಂತನ ಪಾತ್ರದಲ್ಲಿದ್ದವರು ಮಹಾನ್ ಹಾಸ್ಯ ಕಲಾವಿದ
ಪೆರುವಡಿ ನಾರಾಯಣ ಭಟ್ಟರು.
ಸರಿ. ಜಾಂಬವಂತರು ಅಂಗದಲ್ಲಿ ಕೇಳಿದರು...
"ಅಂಗದಾ ನೀನೆಷ್ಟು ದೂರ ಹಾರಬಲ್ಲೆ?"
ಅಂಗದ ಉತ್ತರಿಸಿದ..."ಜಾಂಬವಂತರೇ... 40 ಮೀಟರ್ ಹಾರಬಲ್ಲೆ"
ಹಾಸ್ಯಕಲಾವಿದರು ಇಂಥ ವಿಷಯ ಸಿಕ್ಕರೆ ಬಿಟ್ಟಾರೆ? "ಅಂಗದ... 40 ಮೀಟರ್ ಹಾರಿದರೆ ಲಂಕೆಗೆ
ಬಿಡು, ಈ ಸಭೆಯಿಂದ ಹೊರ ಹೋಗುವುದಿಲ್ಲ" ಎಂದು ನೆರೆದವರನ್ನೆಲ್ಲ ನಗೆಗಡಲಲ್ಲಿ ಮುಳುಗಿಸಿದರು.
ಅಂಗದ ಪಾತ್ರಧಾರಿ ಮಾಡಿದಂಥ ಅಚಾತುರ್ಯಗಳು ಆಗಾಗ ನಡೆಯುತ್ತವೆ. ಅದು ಸಾಮಾನ್ಯ.
ಹಾಗಂತ, ತಪ್ಪುಗಳನ್ನು ತಿದ್ದಿಕೊಳ್ಳದೇ ಇರುವುದು ಸರಿಯಲ್ಲ.
Sunday, May 3, 2009
ಬಲ್ಲಿರೇನಯ್ಯ: ಭಾಗವತರು
ನಡೆಯುವುದು. ಯಕ್ಷಗಾನ ಪದ್ಯವನ್ನು ರಾಗ ಸಮೇತ ಹಾಡುವುದು ಇವರ ಕೆಲಸ.
ಯಕ್ಷಗಾನದಲ್ಲಿ ಭಾಗವತರ ಕಾರ್ಯ ಇಷ್ಟಕ್ಕೇ ಸೀಮಿತಗೊಳ್ಳುವುದಿಲ್ಲ. ಒಬ್ಬ ಅರ್ಥಧಾರಿ, ಪದ್ಯದ
ಅರ್ಥವನ್ನು ಸಮರ್ಥವಾಗಿ ವ್ಯಾಖ್ಯಾನಿಸಲು ತಡವರಿಸಿದಲ್ಲಿ ಆತನನ್ನು ಆಪತ್ತಿನಿಂದ ಪಾರು
ಮಾಡುವುದೇ ಭಾಗವತರು.
ಭಾಗವತರ ಜ್ಞಾನ: ಯಾರೇ ಒಬ್ಬ ಯಕ್ಷಗಾನ ಕಲಾವಿದ( ಹಿಮ್ಮೇಳ, ಮುಮ್ಮೇಳ ಯಾವುದೇ ಇರಲಿ)
ಯಕ್ಷಗಾನದ ಸಮಸ್ತ ಆಯಾಮಗಳನ್ನೂ ತಿಳಿದಿರಬೇಕಾಗುತ್ತದೆ. ಅದರಲ್ಲೂ ಭಾಗವತರು
ಸೂತ್ರಧಾರಿಯಾಗಿರುವುದರಿಂದ ಕಡ್ಡಾಯವಾಗಿ ತಿಳಿದುಕೊಂಡಿರಬೇಕು. ಪ್ರಸಂಗದ ಸಂಪೂರ್ಣ ಜ್ಞಾನ
ಅವರಲ್ಲಿರಬೇಕು.
ತಾಳ, ರಾಗ ಶೃತಿ ಎಲ್ಲವನ್ನೂ ಸೂಕ್ತ ರೀತಿಯಲ್ಲಿ ಹೊಂದಿಸಿಕೊಂಡು ಹೋಗುವ ಕಲೆ ಅವರಿಗೆ
ಕರಗತವಾಗಿರಬೇಕು.
ಒಂದು ಪ್ರಸಂಗದ ಪದ್ಯ ಹಲವಾರು ರಾಗಗಳಿಂದ ಕೂಡಿರುತ್ತದೆ. (ರಾಗಗಳ ಬಗ್ಗೆ ಮುಂದಿನ ದಿನಗಳಲ್ಲಿ
ಪ್ರಕಟಿಸಲಾಗುವುದು.) ಈ ಎಲ್ಲಾ ರಾಗಗಳನ್ನು ಅಭ್ಯಸಿಸಿದರಷ್ಟೇ ಒಬ್ಬಾತ ಭಾಗವತ ಅನ್ನಿಸಿಕೊಳ್ಳಲು
ಸಾಧ್ಯ. ಕೇವಲ ರಾಗ ಗೊತ್ತಿದ್ದರಷ್ಟೇ ಸಾಲದು, ಯಾವ ಪದ್ಯಕ್ಕೆ ಯಾವ ರಾಗ ಎಂಬುದನ್ನೂ
ಅರಿತಿರಬೇಕು. ಅದೆಷ್ಟೋ ಪ್ರಸಂಗಗಳನ್ನು ಕಂಠಪಾಠ ಮಾಡಿದ ಭಾಗವತರೂ ಇದ್ದಾರೆ.
ಉದಾಹರಣೆಗೆ ಬಲಿಪ ನಾರಾಯಣ ಭಾಗವತರು 150ಕ್ಕೂ ಹೆಚ್ಚು ಪ್ರಸಂಗಗಳನ್ನು ಕಂಠಪಾಠ
ಮಾಡಿದ್ದಾರೆ.
ಭಾಗವತರ ವೇಷ ಭೂಷಣ: ಯಕ್ಷಗಾನದಲ್ಲಿ ವೇಷಧಾರಿಗಳಿಗೆ ಮಾತ್ರ ನಿರ್ದಿಷ್ಟ ವೇಷ
ಭೂಷಣಗಳಿರುವುದಲ್ಲ. ಹಿಮ್ಮೇಳದವರೂ ಸಾಂಪ್ರದಾಯಿಕ ಉಡುಗೆ ಧರಿಸುವುದು ಪದ್ಧತಿ. ಭಾಗವತರು
ಸೇರಿದಂತೆ ಎಲ್ಲಾ ಹಿಮ್ಮೇಳದವರು ಬಿಳಿ ಪಂಚೆ, ಅದಕ್ಕೊಪ್ಪುವ ಸಾಂಪ್ರದಾಯಿಕ ಅಂಗಿ (ಜುಬ್ಬಾ ಕೂಡ
ಆದೀತು.), ಹೆಗಲಿಗೊಂದು ಶಲ್ಯ, ತಲೆಗೆ ಕೆಂಪು ರುಮಾಲು ಧರಿಸಬೇಕು.
ಪ್ರಮುಖ ಭಾಗವತರು: ಯಕ್ಷಗಾನ ಕ್ಷೇತ್ರದಲ್ಲಿ ಹಲವಾರು ಭಾಗವತರು ಕೀರ್ತಿ ಶಿಖರ ಏರಿದ್ದಾರೆ,
ಹಲವಾರು ಮಂದಿ ಆ ಹಾದಿಯಲ್ಲಿದ್ದಾರೆ. ಇಲ್ಲಿ ಸಾಂದರ್ಭಿಕವಾಗಿ ಕೆಲವು ಹೆಸರುಗಳನ್ನಷ್ಟೇ
ಉಲ್ಲೇಖಿಸುತ್ತೇನೆ. ಹಾಗಂತ ಇಷ್ಟೇ ಮಂದಿ ಭಾಗವತರು ಇರುವುದು ಎಂದರ್ಥವಲ್ಲ. ಎಲ್ಲಾ ಭಾಗವತರ
ಬಗೆಗಿನ ವಿವರಗಳನ್ನು ಧೀಂಕಿಟ ಬಳಗ ಪ್ರಕಟಿಸುತ್ತದೆ.
1. ದಾಮೋದರ ಮಂಡೆಚ್ಚ
2. ಕಡತೋಕ ಮಂಜುನಾಥ ಭಾಗವತ
3. ಇರಾ ಗೋಪಾಲ ಕೃಷ್ಣ ಭಟ್ಟ
4. ಬಲಿಪ ನಾರಾಯಣ ಭಾಗವತ
5. ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ
6. ಪದ್ಯಾಣ ಗಣಪತಿ ಭಟ್ಟ
7. ಪುತ್ತಿಗೆ ರಘುರಾಮ ಹೊಳ್ಳ
8. ದಿನೇಶ ಅಮ್ಮಣ್ಣಾಯ
9. ಬಲಿಪ ಪ್ರಸಾದ ಭಟ್ಟ
10. ಗುಂಡ್ಮಿ ಕಾಳಿಂಗ ನಾವಡ ( ಭಾಗವತಿಕೆಗೆ ಆಧುನಿಕ ಸ್ಪರ್ಶ ನೀಡಿದವರು ಗುಂಡ್ಮಿ ಕಾಳಿಂಗ
ನಾವಡರು. ಭಾವಗೀತೆಗಳನ್ನೂ ಪ್ರಸಂಗಕ್ಕೆ ಅಳವಡಿಸಿ ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ
ನಾವಡರದ್ದು. ಚಿಕ್ಕ ವಯಸ್ಸಿನಲ್ಲೇ ಯಕ್ಷಗಾನ ಪ್ರವೇಶಿಸಿದ ಅವರು, ಅಷ್ಟೇ ಬೇಗ ಕೀರ್ತಿ ಶಿಖರ
ಏರಿದವರು.)
ಲೇಖನ: ಸಂಗೀತಾ ಪುತ್ತೂರು
Tuesday, April 28, 2009
ವಿಶೇಷ ಲೇಖನ: ಚೆಂಡೆ ಮಾಂತ್ರಿಕ ಚಿಪ್ಪಾರು ಅಸ್ತಂಗತ
ಯಕ್ಷಗಾನದ ಮೇರು ಪ್ರತಿಭೆ, ಚೆಂಡೆ ಮಾಂತ್ರಿಕ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಸೋಮವಾರಬೆಂಗಳೂರಿನಲ್ಲಿ ಇಹ ಲೋಕಕ್ಕೆ ವಿದಾಯ ಹೇಳಿದ್ದಾರೆ.
ಚೆಂಡೆ ಮದ್ದಳೆ ವಾದಕರಾಗಿ ಮಾತ್ರವಲ್ಲದೆ, ಯಕ್ಷಗಾನ ಪ್ರತಿಭೆಗಳನ್ನೂ ರೂಪಿಸಿದ ಕೀರ್ತಿ
ಚಿಪ್ಪಾರರದ್ದು. ಅವರು ಚೆಂಡೆ ಹಿಡಿದು ರಂಗಸ್ಥಳಕ್ಕೆ ಪ್ರವೇಶಿಸಿದರೆಂದರೆ ಪ್ರೇಕ್ಷಕರು ತನ್ಮಯ. ಚಿಪ್ಪಾರರ
ಚೆಂಡೆ ವಾದನಕ್ಕೆ ಎಂತಹ ಅರಸಿಕನೂ ತಲೆದೂಗಲೇ ಬೇಕು.
ಯಕ್ಷಗಾನ ಕ್ಷೇತ್ರದಲ್ಲಿ ಚೆಂಡೆ ಮಾಂತ್ರಿಕರೆಂದೇ ಖ್ಯಾತಿ ಪಡೆದ ಚಿಪ್ಪಾರು ಜೀವನದ
ಕೊನೆಯುಸಿರಿನವರೆಗೂ ಚೆಂಡೆಯೊಡನೆ ಬಾಂಧವ್ಯ ಬೆಳೆಸಿಕೊಂಡಿದ್ದರು. ಅರ್ಥಾತ್ ಚೆಂಡೆ ಮಾಂತ್ರಿಕ
ಜಗತ್ತಿಗೆ, ಯಕ್ಷಗಾನ ಕ್ಷೇತ್ರಕ್ಕೆ ಚೆಂಡೆ ಬಾರಿಸುತ್ತಲೇ ವಿದಾಯ ಹೇಳಿದರು.
ಸೋಮವಾರ (ಏ. 27, 2009) ಬೆಂಗಳೂರಿನ ಕೋರಮಂಗಲದಲ್ಲಿ ಯಡನೀರು ಮೇಳವು ಯಕ್ಷಗಾನ
ಆಟವನ್ನು ಆಯೋಜಿಸಿತ್ತು. 80ರ ಇಳಿವಯಸ್ಸಿನ ಚಿಪ್ಪಾರು 20 ಯುವಕರೂ ನಾಚುವಂತೆ,
ಉತ್ಸಾಹದಿಂದಲೇ ಚೆಂಡೆ ಬಾರಿಸಲು ಸಿದ್ಧರಾಗಿದ್ದರು. 6 ಗಂಟೆಗೆ ಕೇಳಿ ಬಡಿಯುವ (ಹೀಗೆಂದರೇನೆಂಬ
ಬಗ್ಗೆ ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು) ಮೂಲಕ ಪ್ರಸಂಗಕ್ಕೆ ಮುನ್ನುಡಿಯನ್ನೂ ಬರೆದಿದ್ದರು.
ಆಗಲೇ ಚಿಪ್ಪಾರು ಹೃದಯಾಘಾತದಿಂದ ಕುಸಿದರು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ
ಮಾರ್ಗ ಮಧ್ಯಯೇ ಕೊನೆಯುಸಿರೆಳೆದರು. ಚಿಪ್ಪಾರರಿಗೆ ಬೆಳಗ್ಗೆಯೂ ಒಮ್ಮೆ ಹೃದಯಾಘಾತವಾಗಿತ್ತು.
ಆದರೆ, ಅವರನ್ನು ಪರಿಶೀಲಿಸಿದ ವೈದ್ಯರು ಯಾವುದೇ ಅಪಾಯವಿಲ್ಲ ಎಂದಿದ್ದರು. ಚಿಪ್ಪಾರು ಅವರು ಪತ್ನಿ
ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.
ಚಿಪ್ಪಾರು ಅವರ ತವರು: ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಜನಿಸಿದ್ದು 1928ರ ಏ. 24ರಂದು, ಕೇರಳದ
ಕಾಸರಗೋಡು ಜಿಲ್ಲೆಯ ಬಾಯಾರು ಸಮೀಪದ ಚಿಪ್ಪಾರು ಎಂಬಲ್ಲಿ. ತಂದೆ ಮರಿಮಯ್ಯ ಬಲ್ಲಾಳ್
ಮದ್ದಳೆ ವಾದಕರು.
ಚಿಪ್ಪಾರು ವಿದ್ಯಾಭ್ಯಾಸ ಮಾಡಿದ್ದು 6ನೇ ತರಗತಿ ವರೆಗೆ ಮಾತ್ರ. ವಿದ್ವಾನ್ ಕೇಶವ ಭಟ್ ಚಿಪ್ಪಾರರ
ಮೊದಲ ಗುರು. ನಂತರ ಮಾಂಬಾಡಿ ನಾರಾಯಣ ಭಾಗವತರು ಮತ್ತು ಕುದ್ರಕೋಡ್ಲು ರಾಮಭಟ್
ಅವರಿಂದ ಪಾಠ ಹೇಳಿಸಿಕೊಂಡರು. ವಿದ್ವಾನ್ ಬಾಬು ರೈ ಅವರಿಂದ ಮೃದಂಗ ವಾದನವನ್ನು ಕಲಿತರು.
ಇದೇ ವೇಳೆ, ನಿಡ್ಲೆ ನರಸಿಂಹ ಭಟ್ಟರ ಮದ್ದಳೆ ವಾದನಕ್ಕೆ ಮಾರುಹೋದ ಚಿಪ್ಪಾರು, ಅವರಿಂದ ಮದ್ದಳೆ
ವಾದನವನ್ನೂ ಕಲಿತರು. ನಂತರ, ಸ್ಥಳೀಯ ಯುವಕ ವೃಂದದೊಂದಿಗೆ ಮದ್ದಳೆವಾದಕರಾಗಿ ಊರೂರು
ಸುತ್ತಿದ ಚಿಪ್ಪಾರು ಧರ್ಮಸ್ಥಳ ಮೇಳಕ್ಕೆ ಸೇರಿದರು. ಯಕ್ಷಗಾನದ ಮಹಾನ್ ಪ್ರತಿಭೆ ಕುರಿಯ ವಿಠಲ
ಶಾಸ್ತ್ರಿಗಳಿಂದ ಯಕ್ಷಗಾನದ ಎಲ್ಲಾ ಆಯಾಮಗಳನ್ನೂ ತಿಳಿದುಕೊಂಡ ಚಿಪ್ಪಾರು 40 ವರ್ಷಕ್ಕೂ ಹೆಚ್ಚು
ಕಾಲ ಧರ್ಮಸ್ಥಳ ಮೇಳದಲ್ಲಿ ಸೇವೆ ಸಲ್ಲಿಸಿದರು.
ಅಗರಿ, ಬಲಿಪ ನಾರಾಯಣ ಭಾಗವತ, ಮಂಡೆಚ್ಚ, ಕಡತೋಕ ಮಂಜುನಾಥ ಭಾಗವತ, ಇರಾ
ಗೋಪಾಲಕೃಷ್ಣ ಭಟ್ಟ , ಪುತ್ತಿಗೆ ರಘುರಾಮ ಹೊಳ್ಳ, ಪದ್ಯಾಣ ಗಣಪತಿ ಭಟ್ಟ, ದಿನೇಶ್ ಅಮ್ಮಣ್ಣಾಯ
ಮೊದಲಾದ ಹಿರಿ-ಕಿರಿಯ ಭಾಗವತರೊಂದಿಗೆ ಹಿಮ್ಮೇಳದಲ್ಲಿ ಚೆಂಡೆ-ಮದ್ದಳೆ ವಾದಕರಾಗಿ
ಕಾರ್ಯನಿರ್ವಹಿಸಿದ ಕೀರ್ತಿ ಇವರದ್ದು, ಹಿಮ್ಮೇಳಕ್ಕೆ ನವೀನ ರೂಪವನ್ನು ಕೊಟ್ಟಿದ್ದೇ ಚಿಪ್ಪಾರು ಕೃಷ್ಣಯ್ಯ
ಬಲ್ಲಾಳರು.
ರಷ್ಯಾ ಅಧ್ಯಕ್ಷರೂ ಮನಸೋತರು: ಚಿಪ್ಪಾರು ಚೆಂಡೆ ವಾದನವೆಂದರೆ ಕೇಳಬೇಕೆ? ಆಟದಲ್ಲಿ ಚಿಪ್ಪಾರು
ಚೆಂಡೆವಾದಕರೆಂದರೆ ಅಲ್ಲಿ ಜನಸಾಗರ. ಅವರ 'ಉರುಳಿಕೆ' ಕೇಳಲೆಂದೇ ಕಾದು ಕುಳಿತ ಮಂದಿಯ
ಮನಸ್ಸನ್ನು ಕ್ಷಣದಲ್ಲೇ ಗೆದ್ದು ಬಿಡುತ್ತಿದ್ದರು ಚಿಪ್ಪಾರು.
1958ರಲ್ಲಿ ರಷ್ಯಾ ಅಧ್.ಕ್ಷರ ಭಾರತ ಪ್ರವಾಸ ವೇಳೆ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು.
ಚಿಪ್ಪಾರರ ಚೆಂಡೆ ವಾದನ. ರಷ್ಯಾ ಅಧ್ಯಕ್ಷರು ಚೆಂಡೆ ವಾದನ ಕೇಳುವುದರಲ್ಲೇ ತಲ್ಲೀನ. ಕೊನೆಗೆ
ಚಿಪ್ಪಾರರಿಗೊಂದು ಶಹಬ್ಬಾಶ್! ಅಷ್ಟು ಅದ್ಭುತವಾಗಿ ಚಿಪ್ಪಾರು ಚೆಂಡೆ ಬಾರಿಸುತ್ತಿದ್ದರು.
ಪುತ್ರನಿಂದಲೂ ಕಲಾ ಸೇವೆ: ಚಿಪ್ಪಾರು ಅವರ ಪುತ್ರ ಮರಿಮಯ್ಯ ಬಲ್ಲಾಳರು ಕಟೀಲು ಶ್ರೀ ದುರ್ಗಾ
ಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಕಲಾವಿದರು. ತಂದೆ ಹಾಕಿದ ಹಾದಿಯಲ್ಲಿ
ಮುನ್ನಡೆಯುತ್ತಿರುವ ಕಲಾ ಸೇವಕ.
ಧರ್ಮಸ್ಥಳ ಮೇಳದಿಂದ ನಿವೃತ್ತಿ ಹೊಂದಿದ ಬಳಿಕ ಹವ್ಯಾಸಿ ಕಲಾವಿದರಾಗಿ ಚಿಪ್ಪಾರು ಕಲಾ ಸೇವೆ
ಮಾಡುತ್ತಿದ್ದರು. 80 ವರ್ಷದ ಇಳಿವಯಸ್ಸಿನಲ್ಲೂ ಚಿಪ್ಪಾರು ಚೆಂಡೆ ವಾದನ ಕುಗ್ಗಿರಲಿಲ್ಲ. ಕಲಾಸೇವೆ
ಮಾಡುತ್ತಲೇ ಇಹಲೋಕವನ್ನು ತ್ಯಜಿಸಿದ್ದೇ ಅವರ ಶ್ರೇಷ್ಠತೆಗೆ ಸಾಕ್ಷಿ
ಚಿಪ್ಪಾರರಿಗೊಲಿದ ಪ್ರಶಸ್ತಿಗಳು: ಕರ್ನಾಟಕ ಜನಪದ ಪ್ರಶಸ್ತಿ, ಕೇರಳ ಅಕಾಡೆಮಿ ಪ್ರಶಸ್ತಿ, ಶೇಣಿ ಪ್ರಶಸ್ತಿ
ಸೇರಿದಂತೆ ಹಲವಾರು ಪ್ರಶಸ್ತಿಗಳು ಚಿಪ್ಪಾರರನ್ನು ಅರಸಿಕೊಂಡು ಬಂದಿವೆ. ದೂರದರ್ಶನದಲ್ಲಿ ಪ್ರಪ್ರಥಮ
ಪ್ರದರ್ಶನ ನೀಡಿದ ಕೀರ್ತಿ ಚಿಪ್ಪಾರರದ್ದು.
ಧೀಂಕಿಟ ಬಳಗದಿಂದ ಶ್ರದ್ಧಾಂಜಲಿ:
ಯಕ್ಷಗಾನ ಕಲೆಯ ಸೇವೆ ಮಾಡುತ್ತಲೇ ಇಹಲೋಕಕ್ಕೆ ವಿದಾಯ ಹೇಳಿದ ಚಿಪ್ಪಾರು ಕೃಷ್ಣಯ್ಯ
ಬಲ್ಲಾಳರಿಗೆ ಧೀಂಕಿಟ ಬಳಗವು ಶ್ರದ್ಧಾಂಜಲಿ ಅರ್ಪಿಸುತ್ತದೆ. ಸಾವು ಎಲ್ಲರಿಗೂ ಬರುವಂಥದ್ದು. ಆದರೆ,
ಇರುವ ಅವಧಿಯಲ್ಲಿ ಸಾಧನೆಯ ಶಿಖರವನ್ನೇರಲು, ಜೊತೆಗೆ ಸಾಧನೆ ಮಾಡುವ ಆಸಕ್ತಿ ಇರುವವರನ್ನೂ
ಕರೆದೊಯ್ಯಬೇಕಾದ್ದು ಪ್ರತಿಯೊಬ್ಬನ ಕರ್ತವ್ಯ. ಯಕ್ಷಗಾನದ ಮೇರುಗಿರಿಯನ್ನು ಏರಿದವರು ಚಿಪ್ಪಾರು.
ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶಿಸಿದ ಚಿಪ್ಪಾರು ಸಮಸ್ತ ಕಲೆಯನ್ನೇ ಬೆಳಗಿದ್ದು ಮಾತ್ರವಲ್ಲದೆ, ಹಲವಾರು
ಪ್ರತಿಭೆಗಳನ್ನೂ ರೂಪಿಸಿದ್ದಾರೆ. ಯಕ್ಷಗಾನಕ್ಕೆ ಅಂಬೆಗಾಲಿಡುವವರಿಗೆ ಗುರುವಾಗಿ, ತಮ್ಮ
ಸಮಕಾಲೀನರಿಗೆ ಮಾರ್ಗದರ್ಶಕರಾಗಿ ಅವರು ಸಲ್ಲಿಸಿದ ಸೇವೆ ಅನನ್ಯ. ಅದರಿಂದಾಗಿಯೇ ಚಿಪ್ಪಾರು
ಇಂದು ಅತ್ಯುನ್ನತ ಸ್ಥಾನದಲ್ಲಿ ನಿಲ್ಲುತ್ತಾರೆ.
ಚೆಂಡೆ ಮಾಂತ್ರಿಕ ಹಾಕಿರುವ ಅಡಿಪಾಯವನ್ನು ಸರಿಯಾಗಿ ಬಳಸಿಕೊಂಡು, ತೆಂಕುತಿಟ್ಟು ಯಕ್ಷಗಾನದ
ಕಂಪನ್ನು ವಿಶ್ವದ ಮೂಲೆಮೂಲೆಯಲ್ಲೂ ಪಸರಿಸಲು ಅವರ ಶಿಷ್ಯವರ್ಗ ಶ್ರಮಿಸಲಿ ಎಂಬುದು ಧೀಂಕಿಟ
ಬಳಗದ ಹಾರೈಕೆ.
Sunday, April 26, 2009
ರಂಗಾಂತರಂಗ: ಯಕ್ಷಗಾನದ ಮೇರುಪ್ರತಿಭೆ ಶೇಣಿ

ಶೇಣಿಯವರು ಯಕ್ಷಗಾನ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ. ಯಕ್ಷಗಾನ ಆಟ ಮತ್ತು
ಕೂಟ(ತಾಳಮದ್ದಳೆ) ಎರಡರಲ್ಲೂ ಮಿಂಚಿದ ಶೇಣಿಯವರು ಇಂದಿನ ಎಲ್ಲಾ ಕಲಾವಿದರಿಗೂ ಮಾದರಿ.
ಕೇರಳದ ಕಾಸರಗೋಡು ಜಿಲ್ಲೆಯ ಉಬ್ಬನದಲ್ಲಿ ಲಕ್ಷ್ಮೀ ಮತ್ತು ನಾರಾಯಣ ಭಟ್ಟ ದಂಪತಿಗೆ 1918ರ
ಏಪ್ರಿಲ್ 7 ರಂದು ಜನಿಸಿದ ಶೇಣಿ, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೇಳ ಮತ್ತು ಕುಂಬಳೆಯಲ್ಲಿ
ಪೂರೈಸಿದರು. ನಂತರ ಮಹಾಜನ ಸಂಸ್ಕೃತ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು.
ಶಿಕ್ಷಣ ಪೂರ್ತಿಗೊಳಿಸಿದ ನಂತರ ಒಂದಷ್ಟು ಸಮಯ ಶಿಕ್ಷಕರಾಗಿಯೂ ಕೆಲಸ ಮಾಡಿದ್ದರು. ಶೇಣಿ
ಯಕ್ಷಗಾನಕ್ಕೆ ಪ್ರವೇಶಿಸಿದ್ದು ಆಕಸ್ಮಿಕವಾಗಿ. ಆದರೆ, ನಂತರ ಇಡೀ ಯಕ್ಷಗಾನ ಕ್ಷೇತ್ರವನ್ನೇ

ಬೆಳಗಿದಂತಹ ಪ್ರತಿಭೆ ಶೇಣಿಯವರದ್ದು.
ಆಟ ಮತ್ತು ಕೂಟಗಳನ್ನು ನೋಡುತ್ತಾ ಅದರತ್ತ ಆಕರ್ಷಿತರಾದ ಶೇಣಿಯವರು, ಮುಖ್ಯವಾಗಿ ವೆಂಕಪ್ಪ
ಶೆಟ್ಟಿ ಮತ್ತು ಕಿರಿಕ್ಕಾಡು ವಿಷ್ಣು ಭಟ್ಟರಿಂದ ಪ್ರೇರಿತರಾಗಿದ್ದರು. ನಂತರ ಕೂಡ್ಲು ಮೇಳವನ್ನು ಸೇರಿದ
ಶೇಣಿಯವರು ಬಹುಕಾಲ ಮಲ್ಪೆ ಶಂಕರನಾರಾಯಣ ಸಾಮಗರೊಂದಿಗೆ (ಶೇಣಿಯವರು
ಹರಿದಾಸರಾಗಲು ಪ್ರೇರಣೆ ಇವರದ್ದೇ) ಅಭಿನಯಿಸಿದರು.
ಕೂಡ್ಲು ಮೇಳದ ನಂತರ ಧರ್ಮಸ್ಥಳ, ಇರಾ, ಸುರತ್ಕಲ್ ಮೇಳಗಳಲ್ಲಿ ವೃತ್ತಿಯನ್ನು ಮುಂದುವರಿಸಿದ
ಶೇಣಿಯವರು ಯಕ್ಷಗಾನ ಕ್ಷೇತ್ರದಲ್ಲಿ ಮೀರಿಸಲು ಅಸಾಧ್ಯವಾದ ಪ್ರತಿಬೆ. ಶೇಣಿಯವರನ್ನು ಯಕ್ಷರಂಗದ
ಭೀಷ್ಮ ಎಂದೂ ಕರೆಯಲಾಗುತ್ತದೆ. (ಶೇಣಿಯವರು ಯಾಕೆ ಯಕ್ಷರಂಗದ ಭೀಷ್ಮ ಎಂಬ ಬಗ್ಗೆ ಧೀಂಕಿಟ
ಬಳಗ ಮಂದಿನ ದಿನಗಳಲ್ಲಿ ಲೇಖನ ಪ್ರಕಟಿಸಲಿದೆ. ನೆನಪಿಡಿ- ಯಕ್ಷರಂಗದ ಭೀಷ್ಮ ಒಬ್ಬರೇ. ಅದು
ಶೇಣಿ).
ಬಪ್ಪನಾಡು ಕ್ಷೇತ್ರ ಮಹಾತ್ಮೆಯಲ್ಲಿ ಬಪ್ಪ ಬ್ಯಾರಿಯ ಪಾತ್ರ ಶೇಣಿಯವರ ಮಹೋನ್ನತ ಪಾತ್ರ. ಈ
ಪಾತ್ರಕ್ಕೆ ಜೀವ ಕೊಟ್ಟವರೇ ಶೇಣಿ. ಈಗ ಅವರಷ್ಟು ಪರಿಪೂರ್ಣವಾಗಿ ಬಪ್ಪ ಬ್ಯಾರಿಯ ಪಾತ್ರ
ಮಾಡುವವರು ಯಾರೂ ಇಲ್ಲ. ಬಪ್ಪ ಬ್ಯಾರಿಯ ಪಾತ್ರಕ್ಕಾಗಿ ಶೇಣಿಯವರು ಇಸ್ಲಾಮನ್ನೂ ಅಧ್ಯಯನ
ಮಾಡಿದ್ದರು. ನಮಾಜು ಮಾಡುವ ವಿಧಾನ, ಕುರಾನಿನ ಅಧ್ಯಾಯಗಳನ್ನೂ ಅವರು ಕಲಿತಿದ್ದರು.
ಶೇಣಿಯವರು ರಾವಣನ ಪಾತ್ರ ಮಾಡಿದರೆ ರಾಮನೇ ಅವರ ಮುಂದೆ ಸೋತು ಬಿಡುತ್ತಿದ್ದ. ಅಂತಹ
ವಾಕ್ಚಾತುರ್ಯ ಅವರದ್ದು. ಬರೇ ಮಾತಿನ ಮಣಿಗಳನ್ನು ಪೋಣಿಸುವುದು ಮಾತ್ರವಲ್ಲ, ಅವರ ಮಾತಿನಲ್ಲಿ
ಅಷ್ಟೇ ತೂಕವಿರುತ್ತಿತ್ತು. ಮಾತಿ ಹಿಂದೆ ಜ್ಞಾನಸಾಗರವೇ ಇತ್ತು.
ಅರಸಿಕೊಂಡು ಬಂದ ಪ್ರಶಸ್ತಿಗಳು: ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ (1990), ಕೇರಳ
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ(1993), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಪ್ರಶಸ್ತಿ (1994),
ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ (2005)
ಇಹಲೋಕಕ್ಕೆ ಕೊನೆಯ ನಮನ: ಯಕ್ಷಗಾನದ ಮೇರು ಪ್ರತಿಭೆ ಶೇಣಿಯವರು 2006ರ ಜುಲೈ
18ರಂದು ಕಾಸರಗೋಡಿನಲ್ಲಿ ಇಹಲೋಕಕ್ಕೆ ವಿದಾಯ ಹೇಳಿದರು. ಅದೆಷ್ಟೋ ಯಕ್ಷರಾತ್ರಿಗಳನ್ನು ಬೆಳಗಿದ ಶೇಣಿಯವರು,
ತಮ್ಮ ಶಿಷ್ಯಂದಿರಿಗೆ ಸನ್ಮಾರ್ಗವನ್ನೇ ತೋರಿಸಿಕೊಟ್ಟಿದ್ದಾರೆ. ಯಕ್ಷಗಾನದ ಕಂಪನ್ನು ಜಗದ
ಉದ್ದಗಲಕ್ಕೂ ಹಬ್ಬಿಸಿದ ಕೀರ್ತಿ ಶೇಣಿಯವರಿಗೆ ಸಲ್ಲುತ್ತದೆ.
Sunday, April 19, 2009
ಪ್ರಸಂಗದ ಸುತ್ತ...: ದೇವಿ ಮಹಾತ್ಮೆ

ಆರಂಭಗೊಳ್ಳುತ್ತದೆ. ದೇವಿ ಮಹಾತ್ಮೆಯಲ್ಲಿ ಜಗತ್ತಿನ ಸೃಷ್ಟಿ, ನಂತರದಲ್ಲಿ ಜಗದ ಉದ್ಧಾರಕ್ಕಾಗಿ
ಜಗಜ್ಜನನಿಯ ಅವತಾರಗಳು ಮತ್ತು ರೂಪಾಂತರಗಳ ಚಿತ್ರಣವಿದೆ.
ಎತ್ತ ನೋಡಿದರೂ ಮಹಾನ್ ಸಾಗರ. ಭೂಮಿಯ ಸುಳಿವೇ ಇಲ್ಲ. ಇಂತಹ ಘೋರ ಶರದಿಯ
ಮಧ್ಯದಲ್ಲಿ ತ್ರಿಮೂತಿಗಳ ಜನನವಾಗುತ್ತದೆ. ತಮ್ಮ ಜನನಕ್ಕೆ ಕಾರಣಕರ್ತರಾರೆಂದು ಇವರು
ಚಿಂತಿಸುತ್ತಿರಬೇಕಾದರೆ ಜಗನ್ಮಾತೆ ಪ್ರಕಟಗೊಂಡು ಜನ್ಮ ರಹಸ್ಯವನ್ನು ತಿಳಿಸಿ ಅವರಿಗೆ ಬ್ರಹ್ಮ, ವಿಷ್ಣು,
ಮಹೇಶ್ವ್ಟರರೆಂದು ನಾಮಕರಣ ಮಾಡುತ್ತಾಳೆ.
(ತೀರಾ ಇತ್ತೀಚಿನ ನಾಗರಿಕ ಯುಗದಲ್ಲಿ ಜೀವ ಸೃಷ್ಟಿ ನೀರಿನಲ್ಲೇ ಆರಂಭವಾಯಿತು ಎಂದು
ವಿಜ್ಞಾನಿಗಳು ನಿರೂಪಿಸಿದ್ದಾರೆ. ಆದರೆ, ಭಾರತದ ಪ್ರತಿಯೊಂದು ಶಾಸ್ತ್ರವೂ, ಪುರಾಣಗಳೂ, ವೇದ,
ಉಪನಿಷತ್ ಗಳೂ ಬಹಳ ಹಿಂದೆಯೇ ಈ ವಿಚಾರವನ್ನು ಹೇಳಿವೆ ಎಂಬುದಕ್ಕೆ ಇದು ಸಾಕ್ಷಿ.)
ನಂತರ ಅವರಿಗೆ ಅವರದ್ದೇ ಆದ ಜವಾಬ್ದಾರಿಗಳನ್ನೂ ನೀಡುತ್ತಾಳೆ. ಬ್ರಹ್ಮ, ರಾಜಸ್ವ ಗುಣದಿಂದ ಕೂಡಿದ
ಕಾರಣ ಸೃಷ್ಟಿ ಕಾರ್ಯವನ್ನೂ, ವಿಷ್ಣುವು ಸೌಮ್ಯ ಸ್ವಭಾವದವನಾದ್ದರಿಂದ ಪಾಲನಾ ಕಾರ್ಯವನ್ನೂ
(ಸ್ಥಿತಿ), ಈಶ್ವರನು ಉಗ್ರ ಸ್ವರೂಪಿಯಾದ್ದರಿಂದ ಆತನಿಗೆ ಲಯಕರ್ತನ ಜವಾಬ್ದಾರಿಯನ್ನೂ ನೀಡುತ್ತಾಳೆ.
ಯಾವುದದಾದರೂ ಸಮಸ್ಯೆಗಳಿದ್ದಲ್ಲಿ ನನ್ನನ್ನೇ ಭಕ್ತಿಯಿಂದ ಸ್ಥುತಿಸಿದರೆ ಅಭಯವನ್ನು ನೀಡುವುದಾಗಿ
ಅನುಗ್ರಹಿಸಿ ಅಂತರ್ದಾನಳಾಗುತ್ತಾಳೆ.
ಇಷ್ಟಾಗುವಾಗ ತ್ರಿಮೂತಿಗಳಲ್ಲಿ ತಮ್ಮಲ್ಲಿ ದೊಡ್ಡವವರಾರೆಂಬ ಪ್ರಶ್ನೆ ಮೂಡುತ್ತದೆ. ಬ್ರಹ್ಮ ತಾನೇ
ದೊಡ್ಡವನೆಂದರೆ ವಿಷ್ಣು ನಾನು ಎನ್ನುತ್ತಾನೆ. ಈಶ್ವರ ಹರಿ-ಹರರಲ್ಲಿ ಭೇದವಿಲ್ಲ ಎಂದು ಹರಿಯಲ್ಲಿ
ಐಕ್ಯಗೊಳ್ಳುತ್ತಾನೆ. ನಂತರ ವಿಷ್ಣುವು ಬ್ರಹ್ಮನ ಬಾಯಿಯ ಮೂಲಕ ಆತನ ಉದರ ಹೊಕ್ಕು
ಪರಿಶೀಲಿಸುತ್ತಾನೆ. ಎತ್ತ ನೋಡಿದರೂ ಚಿನ್ನದ ಗಟ್ಟಿಯೇ ಕಂಡುಬಂದು ಚಕಿತಗೊಳ್ಳುತ್ತಾನೆ. ಆಗಲೇ
ಬ್ರಹ್ಮ, ತನ್ನ ನವದ್ವಾರಗಳ ಪೈಕಿ ಗುದವೊಂದನ್ನು ಬಿಟ್ಟು 8 ದ್ವಾರಗಳನ್ನು ಮುಚ್ಚುತ್ತಾನೆ. ಹರಿ
ವಿಧಿಯಿಲ್ಲದೇ ಗುದದ್ವಾರದ ಮೂಲಕವೇ ಹೊರ ಬರುವ ಕಾರಣ ಆತನಿಗೆ ಅಧೋಕ್ಷಜ ಎಂಬ ಹೆಸರು
ಅನ್ವರ್ಥವಾಗುತ್ತದೆ. ಬ್ರಹ್ಮನ ಗಭದಲ್ಲಿ ಹಿರಣ್ಯವೇ(ಚಿನ್ನ) ತುಂಬಿರುವುದರಿಂದ ಆತ
ಹಿರಣ್ಯಗರ್ಭನಾಗುತ್ತಾನೆ.
ನಂತರದ ಸರದಿ ಬ್ರಹ್ಮನದ್ದು. ಬ್ರಹ್ಮ ವಿಷ್ಣುವಿನ ಬಾಯಿಯ ಮೂಲಕ ಉದರ ಹೊಕ್ಕು ನೋಡಿದರೆ
ಆತನಿಗೆ ಬ್ರಹ್ಮಾಂಡವೇ ಕಾಣುತ್ತದೆ. ದ್ವಾದಶ (12) ಬ್ರಹ್ಮರೂ ಕಾಣುತ್ತಾರೆ. (ಒಂದೊಂದು ಯುಗದ
ನಂತರವೂ ಮತ್ತೊಂದು ಯುಗ ಆರಂಭವಾಗುತ್ತದೆ ಎಂಬುದಕ್ಕೆ ಪುರಾಣದಲ್ಲಿನ ಪುರಾವೆಯಿದು.)
ಒಂದೆಡೆ ಈಶ್ವರನೂ ಕಾಣುತ್ತಾನೆ.
ಬ್ರಹ್ಮ 8 ದ್ವಾರ ಮುಚ್ಚಿದ್ದ. ವಿಷ್ಣು ನವದ್ವಾರಗಳನ್ನೆಲ್ಲ ಮುಚ್ಚಿ ನಿದ್ರೆ ಹೋಗುತ್ತಾನೆ. ಈಗಲೇ
ಮಧು-ಕೈಟಭರ ಜನನವಾಗುವುದು. ವಿಷ್ಣು ತನ್ನ ಕಿವಿಯಿಂದ ತೆಗೆದೆಸೆದ ಕಶ್ಮಲದಿಂದ (ವ್ಯಾಕ್ಸ್)
ಇವರೀವರ ಜನನವಾಗುತ್ತದೆ. (ನೆನಪಿರಲಿ ಮಧು-ಕೈಟಭರು ರಾಕ್ಷಸರಲ್ಲ.)
ಅದೇ ಹೊತ್ತಿಗೆ, ವಿಷ್ಣುವಿನ ಉದರದೊಳಗಿರುವ ಬ್ರಹ್ಮ, ಹೊರ ಬರಲು ದಾರಿ ಕಾಣದೆ ಪರಿತಪಿಸುತ್ತಾ
ನೆ. ಜಗನ್ಮಾತೆಯ ಸ್ಮರಣೆ ಮಾಡಿದಾಗ, ವಿಷ್ಣುವಿನ ನಾಭಿಯಿಂದ (ಹೊಕ್ಕುಳು) ಹೊರ ಬರಲು
ಸೂಚಿಸುತ್ತಾಳೆ. ಬ್ರಹ್ಮ ಹೊರಬಂದಾಗ, ಹಸಿವಿನಿಂದ ಕಂಗೆಟ್ಟಿದ್ದ ಮಧು-ಕೈಟಭರು ಆತನ ಮೇಲೆ
ಆಕ್ರಮಣ ಮಾಡುತ್ತಾರೆ. ಬ್ರಹ್ಮ "ನಾರಾಯಣ.. ನಿನಗಿಂತ ಹಿರಿಯರಿಲ್ಲ" ಎಂದು ವಿಷ್ಣುವಿನ ಮೊರೆ
ಹೋಗುತ್ತಾನೆ. ನಂತರ ವಿಷ್ಣು ಚಕ್ರಾಯುಧದಿಂದ ಮಧು-ಕೈಟಭರ ವಧೆ ಮಾಡಿ ಭೂಮಿಯನ್ನು
ನಿರ್ಮಿಸುತ್ತಾನೆ. (ಮಧು-ಕೈಟಭರ ಕಥೆ ತ್ರಿಮೂತಿಗಳಲ್ಲಿ ಭೇದವಿಲ್ಲ ಎಂಬುದನ್ನು ಪ್ರಚುರಪಡಿಸುತ್ತದೆ.)
ಇದು ದೇವಿ ಮಹಾತ್ಮೆಯ ಒಂದು ಭಾಗ. ನಂತರ ಭೂಮಿಯ ಮೇಲೆ ಮಹಿಷಾಸುರನ
ಜನನವಾಗುತ್ತದೆ. (ಮಹಿಷಾಸುರ ಜನನಕ್ಕೂ 1 ಕಥೆಯಿದೆ ಅದನ್ನು ಮುಂದಿನ ದಿನಗಳಲ್ಲಿ ಧೀಂಕಿಟ
ಬಳಗ ಪ್ರಕಟಿಸುತ್ತದೆ.) ಮಹಿಷಾಸುರ ಭೂಲೋಕದಲ್ಲಿನವರಿಗೆ ಮಾತ್ರವಲ್ಲದೆ ದೇವಲೋಕದವರಿಗೂ
ಉಪಟಳ ಕೊಡಲು ಮುಂದಾಗುತ್ತಾನೆ. ದೇವೇಂದ್ರ ದೇವಲೋಕವನ್ನು ಕಳೆದುಕೊಂಡು
ಭಿಕಾರಿಯಾಗುತ್ತಾನೆ.
ದಾನವರನ್ನು ಸೋಲಿಸುವ ದಾರಿ ಕಾಣದೆ ದೇವೇಂದ್ರಾದಿ ದೇವತೆಗಳು ಜಗಜ್ಜನನಿ, ಯೋಗಮಾಯೆಯ
ಮೊರೆ ಹೋಗುತ್ತಾರೆ. ಆಕೆ, ಮಹಿಷಾಸುರಮರ್ದಿನಿಯಾಗಿ ಅವತರಿಸಿ ಮಹಿಷಾಸುರನನ್ನು
ಸಂಹರಿಸುತ್ತಾಳೆ. ಇಷ್ಟಾದರೂ ದಾನವರ ಉಪಟಳ ಕಡಿಮೆಯಾಗುತ್ತದೆಯೆ? ಇಲ್ಲ.
ಶುಂಭ-ನಿಶುಂಭ, ಚಂಡ-ಮುಂಡ, ರಕ್ತಬೀಜಾಕ್ಷಾದಿ ಅಸುರರ ಜನನವಾಗುತ್ತದೆ. ದೇವತೆಗಳಿಗೆ
ಇವರಿಂದ ಉಪಟಳ ಶುರು. ಮತ್ತೆ ಜಗನ್ಮಾತೆಯನ್ನೇ ಸ್ತುತಿಸುತ್ತಾರೆ. ಜಗನ್ಮಾತೆ ಅಸುರರನ್ನು
ಮುಗಿಸುವ ಭರವಸೆ ನೀಡಿ, ವೃಂದಾವನದಲ್ಲಿ ಶಾಂಭವೀ ರೂಪದಲ್ಲಿ ಪ್ರಕಟಗೊಳ್ಳುತ್ತಾಳೆ. ಸಂಗೀತ
ಗಾಯನ ಮಾಡುತ್ತಾ, ಉಯ್ಯಾಲೆಯಾಡುತ್ತಾ ವಿಹರಿಸುತ್ತಾಳೆ. (ಸಂಗೀತದಲ್ಲಿ ಶಾಂಭವೀ ರಾಗ
ಎಂದೇ ಇದೆ.)
ಆಕೆಯ ವಿಚಾರ ತಿಳಿವ ಶುಂಭಾಸುರ ದೇವಿಯನ್ನು ವರಿಸಲು ಮುಂದಾಗುತ್ತಾನೆ. ಯಾರು ಎಷ್ಟು
ಬುದ್ಧಿವಾದ ಹೇಳಿದರೂ ತನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ದೂತನ ಮೂಲಕ ದೇವಿಗೆ
ತನ್ನನ್ನು ಮದುವೆಯಾಗುವಂತೆ ಹೇಳಿ ಕಳುಹಿಸುತ್ತಾಳೆ. ದೇವಿ "ಶುಂಭನೇ ಬರಲಿ ಶಂಭುವೇ ಬರಲಿ
ಅಂಜುವುದಿಲ್ಲ" ಎಂದು ಹೇಳಿಕಳುಹಿಸುತ್ತಾಳೆ. ಇಷ್ಟಕ್ಕೇ ಶುಂಭ ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ,
ಧೂಮ್ರಾಕ್ಷನನ್ನು ಕಳುಹಿಸುತ್ತಾನೆ. ದೇವಿ ಕಣ್ಣ ನೋಟದಿಂದಲೇ ಧೂಮ್ರಾಕ್ಷನನ್ನು ಸುಟ್ಟುಬಿಡುತ್ತಾಳೆ.
ಕ್ರೋಧಗೊಂಡ ಶುಂಭ ಚಂಡ-ಮುಂಡರನ್ನು ಕಳುಹಿಸುತ್ತಾನೆ. ದೇವಿ ಭದ್ರಕಾಳಿಯಾಗಿ ಚಂಡ-ಮುಂಡರ
ಶಿರವನ್ನು ಚಂಡಾಡುತ್ತಾಳೆ. ನಂತರದ ಸರದಿ ರಕ್ತಬೀಜಾಕ್ಷನದ್ದು. ಈತನ ದೇಹದ ರಕ್ತ ನೆಲಕ್ಕೆ
ಸೋಕಿದರೆ ಕೋಟಿ ಕೋಟಿ ಸಂಖ್ಯೆಯ ರಾಕ್ಷಸರು ಹುಟ್ಟುವ ವರವನ್ನು ಪಡೆದವ ರಕ್ಷಬೀಜಾಕ್ಷ.
ಈತನನ್ನು ರಕ್ತೇಶ್ವರಿಯಾಗಿ ರೂಪಾಂತರಗೊಂಡು ವಧಿಸುತ್ತಾಳೆ ಜಗನ್ಮಾತೆ. ಶುಂಭ-ನಿಶುಂಭರನ್ನು
ಶಾಂಭವಿಯಾಗಿಯೇ ಸಂಹರಿಸುತ್ತಾಳೆ. ಇದು ದೇವಿಯ ಮಹಾತ್ಮೆ. (ದೇವಿ ಮಹಾತ್ಮೆಯ ಎಲ್ಲಾ
ಉಪಪ್ರಸಂಗಗಳ ಬಗೆಗಿನ ಲೇಖನಗಳನ್ನೂ ಧೀಂಕಿಟ ಬಳಗ ಮುಂದಿನ ದಿನಗಳಲ್ಲಿ ಪ್ರಕಟಿಸುತ್ತದೆ.)
ಯಕ್ಷಗಾನ ಆಟ: ದೇವಿ ಮಹಾತ್ಮೆಯನ್ನೇ ಹೆಚ್ಚಾಗಿ ಆಡುವ ಮೇಳಗಳೆಂದರೆ- ಕಟೀಲು ಶ್ರೀ
ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ ಮತ್ತು ಮಾರಣಕಟ್ಟೆ ಯಕ್ಷಗಾನ ಮಂಡಳಿ. ಉಳಿದ
ಮೇಳಗಳೂ ಆಡುತ್ತವೆ. ಆದರೆ, ಈ ಮೇಳಗಳದ್ದು ವಿಶೇಷ. ದೇವಿ ಮಹಾತ್ಮೆ ಆಟ ಆಡಿಸುತ್ತೇನೆಂದು
ಹರಕೆ ಹೊತ್ತರೆ ಇಷ್ಟಾರ್ಥಗಳು, ಮನೋಕಾಮನೆಗಳು ನೆರವೇರುತ್ತವೆ.
ದೇವಿ ಮಹಾತ್ಮೆ ಪ್ರಸಂಗ ರಾತ್ರಿ 8-8.30ರ ಹೊತ್ತಿಗೆ ಆರಂಭವಾದರೆ ಮಂಗಳವಾಗುವುದು
ಬೆಳ್ಳಂಬೆಳಗ್ಗೆ 6 ಗಂಟೆಗೆ. ಇಷ್ಟು ಹೊತ್ತು ಇಲ್ಲದಿದ್ದರೆ ಪ್ರಸಂಗವನ್ನು ಸರಿಯಾಗಿ ಆಡಲಾಗುವುದಿಲ್ಲ.
ವಿಶೇಷ: ದೇವಿ ಮಹಾತ್ಮೆ ಪ್ರಸಂಗದ ವಿಶೇಷಗಳು ಹಲವು. ಉಳಿದ ಯಾವುದೇ ಪ್ರಸಂಗದಲ್ಲಿ
ಇಲ್ಲದಂತಹ ಹಲವಾರು ಅಂಶಗಳನ್ನು ಇದರಲ್ಲಿ ಕಾಣಬಹುದು. ಅವುಗಳನ್ನು ಪಟ್ಟಿ ಮಾಡುತ್ತಾ
ಹೋಗುವುದಾದರೆ-1. ಪದ್ಯ- ಗಣಪತಿ ಸ್ತುತಿಯೊಂದಿಗೆ ಪ್ರಸಂಗದ ಪದ್ಯ ಆರಂಭವಾದರೆ ಮಂಗಳದ ವರೆಗೆ ಒಂದೇ ಒಂದು
ಪದವನ್ನೂ ಬಿಡುವಂತಿಲ್ಲ. ಸಮಯ ಇಲ್ಲ, ಬೇಗ ಮುಗಿಸಬೇಕೆಂಬ ಆತುರದಲ್ಲಿ ಪದ್ಯ ಪೂರ್ತಿ ಮಾಡದೇ
ಇರುವಂತಿಲ್ಲ.
2. ದೇವಿ- ದೇವಿಯ ವೇಷ ಮಾಡುವಾಗ ಸಾಮಾನ್ಯವಾಗಿ ಬಳಸುವ 3 ಬಣ್ಣಗಳ ಜೊತೆಗೆ ಕಪ್ಪು
ಬಣ್ಣವನ್ನು ಹೆಚ್ಚಿಗೆ ಬಳಸುತ್ತಾರೆ. ಇಲ್ಲವಾದರೆ, ವೇಷಧಾರಿ ಶರೀರದಲ್ಲೇ ದೇವಿ ಪ್ರಕಟೊಳ್ಳುತ್ತಾಳೆ. (ಈ
ರೀತಿ ಪ್ರಕಟಗೊಂಡ ಘಟನೆಗಳೂ ಇವೆ. ಅವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.)
3. ವೃತ- ದೇವಿ ವೇಷಧಾರಿ ಆಟದ ದಿನ ಸಂಪೂರ್ಣ ವೃತದಲ್ಲಿರಬೇಕಾಗುತ್ತದೆ. ಮಧು-ಮಾಂಸ
ಸೇವಿಸಬಾರದು. ಒಪ್ಪತ್ತು ಊಟವನ್ನೇ ಮಾಡಬೇಕು. ಅಂದು ಸ್ತ್ರೀಸಂಗವನ್ನೂ ಮಾಡಬಾರದು.
4. ಕುಂಬಳಕಾಯಿ ಒಡೆಯುವುದು- ಒಬ್ಬೊಬ್ಬ ರಾಕ್ಷಸನ ವಧೆಯಾಗುತ್ತಿದ್ದಂತೆ ಒಂದೊಂದು
ಕುಂಬಳಕಾಯಿ ಒಡೆದು ಅದಕ್ಕೆ ಕುಂಕುಮ ಹಚ್ಚಲಾಗುತ್ತದೆ. ಇದು, ದೇವಿಗೆ ಅಸುರರನ್ನು ಬಲಿ
ಕೊಡುವುದರ ಸಂಕೇತ.
5. ಪ್ರತಿಯೊಬ್ಬ ರಾಕ್ಷಸನ ವಧೆಯಾಗುವಾಗಲೂ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ.
ಲೇಖನ- ದಿವ್ಯಶ್ರೀ ಬದಿಯಡ್ಕ
Wednesday, April 15, 2009
ಬಲಿಪರ ಭಾಗವತಿಕೆ...
ಪದ್ಯದ ಕೃಪೆ- ಸದಾಶಿವ ಖಂಡಿಗೆ
Sunday, April 12, 2009
ಅಕಟಕಟಾ...! ಅಶೋಕವನದಲ್ಲಿ ನಿದ್ದೆ ಹೋದ ಸೀತೆ...!
ಕಲಾವಿದರು ಯಕ್ಷರಾತ್ರಿಗಳನ್ನು ಬೆಳಗುವುದೆಂದರೆ ಸಾಮಾನ್ಯದ ಕೆಲಸವಲ್ಲ. ಆದರೂ ಯಕ್ಷಗಾನ
ಪ್ರಸಂಗಗಳ ನಡುನಡುವೆ ಹಲವಾರು ವಿಶೇಷ ಪ್ರಸಂಗಗಳು ನಡೆಯುವುದೂ ಇದೆ.
ಹಾಂ! ಇವು ಯಕ್ಷಗಾನ ಪ್ರಸಂಗಗಳಲ್ಲ. ವೀಕ್ಷಕರ ಮನಸ್ಸಿನಲ್ಲಿ ಸಣ್ಣಗೆ ನಗೆ ಮೂಡಿಸುವ, ಕಲಾವಿದರು
ತಮ್ಮ ಜೀವಮಾನವಿಡೀ ಮರೆಯಲಾಗದಂಥ ಪ್ರಸಂಗಗಳು. ಇಂತಹ ಪ್ರಸಂಗಗಳು ಆಗಾಗ
ನಡೆಯುತ್ತಿರುತ್ತವೆ.
ಇಂತಹ ಪ್ರಸಂಗಗಳ ಬೃಹತ್ ಪಟ್ಟಿಯಲ್ಲಿ ಒಂದನ್ನು ಇಂದಿಗೆ ಆರಿಸಿಕೊಂಡಿದ್ದೇವೆ.
ಯಕ್ಷಗಾನದಲ್ಲಿ ಅಭಿನಯಿಸುವುದನ್ನು ಹವ್ಯಾಸವಾಗಿ ಸ್ವೀಕರಿಸಿದ ಯಕ್ಷಗಾನ ಪ್ರಿಯರೋರ್ವರು ಪ್ರಮುಖ
ಕಲಾವಿದರ ಕೂಡುವಿಕೆಯಲ್ಲಿ ಬಯಲಾಟವನ್ನು ಆಡಿಸಲು ನಿರ್ಧರಿಸಿದ್ದರು. ಪ್ರಸಂಗ ರಾಮಾಯಣ
ಒಂದು ಉಪ ಪ್ರಸಂಗವಾದ ಚೂಡಾಮಣಿ.
ಅಂದರೆ, ಸೀತೆಯನ್ನು ರಾವಣ ಅಪಹರಿಸಿರುತ್ತಾನೆ. ಆಕೆಯನ್ನು ಅರಸಿಕೊಂಡು ರಾಮ-ಲಕ್ಷ್ಮಣರು
ಕಾಡಿನಲ್ಲಿ ಅಲೆದಾಡುತ್ತಿದ್ದಾಗ ಸುಗ್ರೀವ ಸಖ್ಯವಾಗುತ್ತದೆ. ಸುಗ್ರೀವನ ವಾನರ ಸೇನೆ ಸೀತೆಯನ್ನು
ಅರಸಲು ಸಜ್ಜಾಗುತ್ತದೆ.
ಈ ಸೇನೆಯಲ್ಲಿ ರಾಮನಿಗೆ ಅಚ್ಚುಮೆಚ್ಚು ಮತ್ತು ಹಿಡಿದ ಕೆಲಸ ಸಾಧಿಸಬಲ್ಲನೆಂಬ ನಂಬಿಕೆ ಇದ್ದಿದ್ದು
ಆಂಜನೇಯನ ಮೇಲೆ. ಆತನಿಗೆ ತನ್ನ ಉಂಗುರ ಕೊಟ್ಟು ಕಳಿಹಿಸುತ್ತಾನೆ. (ಚೂಡಾಮಣಿ ಪ್ರಸಂಗದ
ಬಗ್ಗೆ ಮುಂದಿನ ದಿನಗಳಲ್ಲಿ ಪ್ರಸಂಗದ ಸುತ್ತ ಅಂಕಣದಲ್ಲಿ ವಿವರಿಸಲಾಗುತ್ತದೆ). ಹೀಗೆ ಹೊರಟ
ಆಂಜನೇಯ ಲಂಕೆ ತಲುಪುತ್ತಾನೆ.
ಈಗ ಇರುವುದೇ ಪ್ರಸಂಗದೊಳಗಿನ ವಿಶೇಷ ಪ್ರಸಂಗ. ಲಂಕೆಯಲ್ಲಿ ರಾವಣ ಸೀತೆಯನ್ನು ಅಶೋಕವನದಲ್ಲಿ ಇರಿಸಿರುತ್ತಾನೆ. ಆಂಜನೇಯ ರಾತ್ರಿ ವೇಳೆಯಲ್ಲಿ ಸೀತೆಯನ್ನು ಅರಸುವ ಕಾಯಕದಲ್ಲಿ
ತೊಡಗುವುದರಿಂದ, ಅಶೋಕವನದಲ್ಲಿ ಸೀತೆ ನಿದ್ದೆ ಹೋಗಿರಬೇಕು. ಯಕ್ಷಗಾನದಲ್ಲಿ ಆಗಿದ್ದೂ ಅದೇ.
ಸೀತೆಯ ಪಾತ್ರ ಮಾಡಿದ್ದ ವ್ಯಕ್ತಿ ರಂಗಸ್ಥಳದಲ್ಲೇ ನಿದ್ದೆ ಹೋಗಬೇಕೆ? ಹನುಮ ಮರದ ಮೇಲಿಂದ ಕೆಳಕ್ಕೆ
ಜಿಗಿದರೂ ಸೀತೆಗೆ ಎಚ್ಚರ ಇಲ್ಲ. "ಪರಿಸ್ಥಿತಿ ಕೆಟ್ಟಿತಲ್ಲ" ಎಂದು ಯೋಚಿಸಿದ ಆಂಜನೇಯ "ಅಮ್ಮಾ,
ಸೀತಮ್ಮಾ..." ಎಂದು ಕರೆದ.
ಊಹೂಂ...! ಸೀತೆಗೆ ಎಚ್ಚರವೇ ಇಲ್ಲ. ಕೊನೆಗೆ ಹನುಮ, ಭಾಗವತರು, ಚೆಂಡೆಯವರು ಎಲ್ಲ ಸೇರಿ
ಮಲಗಿದ್ದ ಸೀತೆಯನ್ನು "ರಾಕ್ಷಸರು ಕುಂಭಕರ್ಣನನ್ನು ಎಬ್ಬಿಸಿದಂತೆ" ಎಬ್ಬಿಸಿದರು. ಅಂತೂ
ಪ್ರಸಂಗದೊಳಗಿನ ಪ್ರಸಂಗ ಮುಗಿಯಿತು. ಪ್ರೇಕ್ಷಕರು "ನಿದ್ದೆ ಹೋದ ಸೀತೆ"ಯನ್ನು ನೆನೆಸಿ ನೆನೆಸಿ
ನಕ್ಕರು. ಚೂಡಾಮಣಿ ಪ್ರಸಂಗ ಮುಂದುವರಿಯುತು.
Wednesday, April 8, 2009
ಲೇಖನಗಳಿಗೆ ಆಹ್ವಾನ
ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆರಂಭವಾದ ಧೀಂಕಿಟ ಬ್ಲಾಗ್, ಯಕ್ಷಗಾನ ಪ್ರಿಯರಿಂದ ಯಕ್ಷಗಾನದ ಬಗೆಗಿನ ಲೇಖನಗಳನ್ನು ಆಹ್ವಾನಿಸುತ್ತಿದೆ. ಅದು ಯಕ್ಷಗಾನದ ಮೇರು ಪ್ರತಿಭೆಗಳ ಬಗ್ಗೆಯೇ ಇರಬಹುದು. ಅಥವಾ ಬೆಳೆಯುತ್ತಿರುವ ಪ್ರತಿಭೆಗಳ ಬಗ್ಗೆ, ಯಕ್ಷಗಾನ ತರಗತಿಗಳನ್ನು ನಡೆಸುತ್ತಿರುವವರು ಅಥವಾ ಯಕ್ಷಗಾನಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳ ಬಗ್ಗೆ ಲೇಖನಗಳನ್ನು ಬರೆಯಬಹುದು. ಯೋಗ್ಯವೆನಿಸಿದ ಲೇಖನಗಳನ್ನು ದೀಂಕಿಟ ಬಳಗ ಪ್ರಕಟಿಸುತ್ತದೆ. ಸಂಪಾದಕರ ತೀಮಾನವೇ ಅಂತಿಮ. ಲೇಕನಗಳನ್ನು ಈ ಮೇಲ್ ಮಾಡಬಹುದು. ಅಥವಾ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು.-
ವಿಳಾಸ-ಪ್ರಕಾಶ್ ಪಯಣಿಗಕೇರ್ ಆಫ್ ವೆಂಕಟಸ್ವಾಮಿ ರೆಡ್ಡಿಮನೆ ನಂ- 100/7, 2ನೇ ಮಹಡಿಜಿ ಮುಖ್ಯರಸ್ತೆ, ಜೋಗುಪಾಳ್ಯಹಲಸೂರು, ಬೆಂಗಳೂರು-8
Sunday, April 5, 2009
ಬಲ್ಲಿರೇನಯ್ಯ?: ಯಕ್ಷಗಾನ ಪ್ರಸಂಗ
ಯಕ್ಷಗಾನದಲ್ಲಿ ಒಂದು ಪ್ರಸಂಗ ಎಂದರೆ ಒಂದು ಕಥಾನಕ. ಯಕ್ಷಗಾನದ ಆರಂಭದಲ್ಲಿ ಇದ್ದದ್ದು ಕೇವಲ ಪೌರಾಣಿಕ ಪ್ರಸಂಗಗಳು. ಪುರಾಣ, ವೇದ, ಉಪನಿಷತ್ತುಗಳಲ್ಲಿನ ಕಥಾನಕಗಳೇ ಯಕ್ಷಗಾನ ಪ್ರಸಂಗಗಳಾಗಿ ರೂಪು ಪಡೆದಿವೆ. ಪುರಾಣಗಳಲ್ಲಿನ ದೊಡ್ಡ ಕಥೆಯೇ ಒಂದು ಪ್ರಸಂಗವಾಗುತ್ತದೆ. ಆ ಕತೆಯಲ್ಲೇ ಹಲವಾರು ಪ್ರಸಂಗಗಳು ಹೆಣೆಯಲ್ಪಟ್ಟಿದ್ದೂ ಇದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ- ರಾಮಾಯಣ, ಮಹಾಬಾರತ.
ತೆಂಕುತಿಟ್ಟು ಯಕ್ಷಗಾನದಲ್ಲಿ ರಾಮಾಯಣ, ಮಹಾಭಾರತಗಳಿಂದ ಆಯ್ದ ಅಸಂಖ್ಯಾತ ಪ್ರಸಂಗಗಳಿವೆ. ಕೆಲವನ್ನು ಹೆಸರಿಸುವುದಾದರೆ- ರಾಮಾಯಣದಲ್ಲಿ ಸೀತಾ ಸ್ವಯಂವರ, ಪಂಚವಟಿ, ಶೂಪನಖಿ ಗವಭಂಗ, ಸೀತಾಪಹರಣ, ಸುಗ್ರೀವ ಸಖ್ಯ, ಸೀತಾನ್ವೇಷಣೆ, ಲಂಕಾದಹನ, ಚೂಡಾಮಣಿ, ಹನುಮದ್ವಿಲಾಸ, ಇಂದ್ರಜಿತು ಕಾಳಗ, ಮತ್ಸ್ಯವಾನರ, ಮಹಿರಾವಣ ಕಾಳಗ, ರಾವಣ ವಧೆ ಇತ್ಯಾದಿ....
ಇನ್ನು ಮಹಾಭಾರತದಲ್ಲಿ- ಭೀಷ್ಮ ಪ್ರತಿಜ್ಞೆ, ಕುರುಕ್ಷೇತ್ರ, ಅಶ್ವಮೇಧ ಯಾಗ, ದ್ರೌಪದಿ ವಸ್ತ್ರಾಪಹರಣ, ಶ್ರೀಕೃಷ್ಣ ಸಂಧಾನ, ಶಲ್ಯಾವಸಾನ, ಮಹಾರಥಿ ಕರ್ಣ, ವೀರ ಅಭಿಮನ್ಯು, ಬಬ್ರುವಾಹನ ಕಾಳಗ... ಇನ್ನೂ ಹಲವು.
ಇವಿಷ್ಟು ಮಾತ್ರವಲ್ಲದೆ, ದೇವಿಯ ಮಹಾತ್ಮೆ, ಆಕೆಯ ಅವತಾರಗಳು, ವಿಷ್ಣುವಿನ ದಶಾವತಾರ, ಹಲವಾರು ಕ್ಷೇತ್ರಗಳ ಕ್ಷೇತ್ರ ಮಹಾತ್ಮೆಗಳು, ಪ್ರತಿಯೊಬ್ಬ ದೇವ ದೇವತೆಗೆ ಸಂಬಂಧಪಟ್ಟ, ಹಲವಾರು ರಾಜರುಗಳಿಗೆ ಸಂಬಂಧಿಸಿದ ಪ್ರಸಂಗಗಳೂ ಯಕ್ಷಗಾನದಲ್ಲಿವೆ.
(ಪ್ರತಿಯೊಂದು ಪ್ರಸಂಗದ ಬಗೆಗಿನ ಲೇಖನಗಳನ್ನೂ ಧೀಂಕಿಟ ಬಳಗ ಮುಂದಿನ ದಿನಗಳಲ್ಲಿ ಪ್ರಕಟಿಸುತ್ತದೆ.)
ತೀರಾ ಇತ್ತೀಚಿನ ದಿನಗಳಲ್ಲಿ ಸಿನೆಮಾ ಕಥೆಗಲನ್ನು ಪ್ರಸಂಗಗಳಾಗಿ ರೂಪಾಂತರಿಸಿದ್ದೂ ಿದೆ. ಮುಂಗಾರು ಮಳೆ, ಚೆಲುವಿನ ಚಿತ್ತಾರಗಳು ಪ್ರಸಂಗಗಳಾಗಿವೆ. ಆದರೆ, ಅವುಗಳನ್ನು ಯಕ್ಷಗಾನ ಪ್ರೇಮಿಗಳು ಮನಃಪೂವಕವಾಗಿ ಸ್ವೀಕರಿಸಿಲ್ಲ ಎಂಬುದು ವಿಶೇಷ.
ಯಕ್ಷಗಾನದಲ್ಲಿರುವ ಒಂದೊಂದು ಪೌರಾಣಿಕ ಪ್ರಸಂಗಕ್ಕೂ ಅದರದ್ದೇ ಆದ ವಿಶೇಷತೆ, ಹಿನ್ನೆಲೆ ಇದೆ, ಭಾರತೀಯ ಪರಂಪರೆ, ಪುರಾಣಗಳು, ವೇದ-ಉಪನಿಷತ್ತುಗಳ ಆಧಾರವಿದೆ. ಇದನ್ನು ಅಭಿನಯಿಸುವ ಕಲಾವಿದರೂ ಅಷ್ಟೇ ಜ್ಞಾನಿಗಳಾಗಿರಬೇಕಾಗುತ್ತದೆ. ಪುರಾಣ ಜ್ಞಾನ ಇಲ್ಲದವರು ಈ ಕ್ಷೇತ್ರದಲ್ಲಿ ಯಾವ ಸಾಧನೆಯನ್ನೂ ಮಾಡುವುದು ಅಸಾಧ್ಯ. ಯಕ್ಷಗಾನದ ಮೇರು ಶಿಖರವನ್ನು ಏರಿದ ಕಲಾವಿರೆಲ್ಲರೂ ಈ ವಿಷಯದಲ್ಲಿ ಪ್ರವೀಣರೇ ಆಗಿದ್ದಾರೆ ಎಂಬುದನ್ನು ಗಮನಿಸಬೇಕು.