Sunday, September 13, 2009

ರಂಗಾಂತರಂಗ: ನಿಡ್ಲೆ ಮೇಳ

ಳೆಗಾಲದ ತಿರುಗಾಟದ ಮೇಳಗಳ ಪೈಕಿ ನಿಡ್ಲೆ ಮಹಾಗಣಪತಿ ಯಕ್ಷಗಾನ ಮಂಡಳಿ ಪ್ರಮುಖವಾದುದು. 1984ರ ಆಗಸ್ಟ್ 1ರಂದು ಕಲಾವಿದ ನಿಡ್ಲೆ ಗೋವಿಂದ ಭಟ್ಟ ಅವರ ನೇತೃತ್ವದಲ್ಲಿ ಆರಂಭವಾದ ಈ ಮೇಳಕ್ಕೆ ಈಗ 25ರ ಹರೆಯ.
ಕಳೆದ ತಿಂಗಳ (ಆಗಸ್ಟ್) 2ರಂದು ಮಂಗಳೂರಿನಲ್ಲಿ ನಿಡ್ಲೆ ಮೇಳವು ಬೆಳ್ಳಿಹಬ್ಬದ ಸಂಭ್ರಮ ಆಚರಿಸಿಕೊಂಡಿದೆ. ಪ್ರಸ್ತುತ ಹೈದರಾಬಾದಲ್ಲಿ ಮೇಳದ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದೇ ತಿಂಗಳ 27ರಂದು ಹೊಸಪೇಟೆಯಲ್ಲಿ ಬೆಳ್ಳಿಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಸತತ 25 ವರ್ಷಗಳಿಂದ ಹಿರಿ-ಕಿರಿಯ ಕಲಾವಿದರನ್ನು ಕಲಾವಿದರನ್ನು ಒಗ್ಗೂಡಿಸಿಕೊಂಡು ಮಳೆಗಾಲದಲ್ಲಿ ಮಾತ್ರ ನಿರುಗಾಟ ನಡೆಸುತ್ತಿರುವ ನಿಡ್ಲೆ ಮೇಳಕ್ಕೆ ಕರ್ನಾಟಕದಲ್ಲಿ ಮಾತ್ರವಲ್ಲದೆ ಹೈದ್ರಾಬಾದ್, ವಿಶಾಖಪಟ್ಟಣಂ, ಚೆನ್ನೈ, ಕೊಯಮತ್ತೂರು, ಮುಂಬೈ, ಪುದುಚೇರಿ ಮತ್ತಿತರ ಹಲವಾರು ಕಡೆಯೂ ಅಭಿಮಾನಿಗಳ ಬಳಗ ಇದೆ. ಪ್ರತಿ ವರ್ಷವೂ ಈ ಎಲ್ಲ ಸ್ಥಳಗಳಲ್ಲೂ ಮೇಳ ತಿರುಗಾಟ ನಡೆಸಿ, ಯಕ್ಷಗಾನ ಆಟ ಆಡುತ್ತದೆ.
ಮೇಳದಲ್ಲಿ ನಿಡ್ಲೆ ಗೋವಿಂದ ಭಟ್ಟ, ನಾರಾಯಣ ಭಟ್ಟ, ಸುಬ್ರಾಯ ಹೊಳ್ಳ, ಕುಂಬ್ಳೆ ಶ್ರೀಧರ ರಾವ್, ಕೆದಿಲ ಜಯರಾಮ ಭಟ್ಟ, ಈಶ್ವರಪ್ರಸಾದ್, ಗಂಗಾಧರ ಪುತ್ತೂರು, ವಸಂತ ಕಾಯರ್ತಡ್ಕ, ಶಿವಶಂಕರ ಭಟ್ಟ, ರಾಮಕೃಷ್ಣ ಮಯ್ಯ ಸಿರಿಬಾಗಿಲು, ಪ್ರಭಾಕರ ಘೋರೆ, ದೇಲಂತಮಜಲು ಸುಬ್ರಹ್ಮಣ್ಯ ಭಟ್ಟ ಮತ್ತಿತರ ಹಿರಿ-ಕಿರಿಯಯ ಕಲಾವಿದರು ಯಕ್ಷಗಾನ ಕಲಾಸೇವೆ ಮಾಡುತ್ತಿದ್ದಾರೆ. ಈ ಮೇಳೆ ತನ್ನ ಕಲಾ ಸೇವೆಯನ್ನು ಮುಂದುವರಿಸಲಿ ಎಂಬುದು ಧೀಂಕಿಟ ಬಳಗದ ಹಾರೈಕೆ.

ಯಾರಾದರೂ ಆಟ ಆಡಿಸಬೇಕೆಂದು ಬಯಸಿದಲ್ಲಿ ನಾರಾಯಣ ಭಟ್ಟ ನಿಡ್ಲೆ, ಮೊ-9448976869 ಇವರನ್ನು ಸಂಪರ್ಕಿಸಬಹುದು.

Sunday, September 6, 2009

ಪ್ರಸಂಗದ ಸುತ್ತ: ಶ್ವೇತಕುಮಾರ ಚರಿತ್ರೆ

ಶ್ವೇತಕುಮಾರ ಚರಿತ್ರೆ ಅಥವಾ ಶಿವಪಂಚಾಕ್ಷರೀ ಮಹಾತ್ಮೆ ಯಕ್ಷಗಾನ ಪ್ರಸಂಗಗಳಲ್ಲಿ ವಿಶಿಷ್ಟವಾದುದು. ಶಿವನ ಪಂಚಾಕ್ಷರೀ ಬೀಜಮಂತ್ರದ ಮಹಿಮೆಯನ್ನು ಈ ಪ್ರಸಂಗ ಸಾರುತ್ತದೆ.
ಶ್ವೇತಕುಮಾರನೆಂಬ ರಾಜ ತನ್ನ ರಾಜ್ಯವನ್ನು ಸುಭಿಕ್ಷವಾಗಿ ಆಳುತ್ತಿದ್ದ. ಒಮ್ಮೆ ಕಾಡಿನಲ್ಲಿ ಬೇಟೆಯಾಡಲು ಹೋಗಿದ್ದಾಗ ಋಷಿ ಕನ್ಯೆಯೊಬ್ಬಳನ್ನು ಕಂಡು ಮೋಹಗೊಂಡು ಆಕೆಯನ್ನು ವರಿಸುತ್ತಾನೆ.
ಆದರೆ, ಮತ್ತೊಮ್ಮೆ ಕಾಡೊಳಗೆ ಸುತ್ತಾಡುತ್ತಿದ್ದಾಗ ಯಕ್ಷ ಸ್ತ್ರೀಯೊಬ್ಬಳಿಂದ ಮೋಹಗೊಂಡು ಮಾಡಬಾರದ ಅಪರಾಧಗಳನ್ನು ಮಾಡುತ್ತಾನೆ.
ಹೀಗಿರಲೊಮ್ಮೆ ಆ ರಾಜ್ಯಕ್ಕೆ ಅಸುರನೊಬ್ಬನ ಪ್ರವೇಶವಾಗುತ್ತದೆ. ಆತ ಸಿಕ್ಕಸಿಕ್ಕವರನ್ನೆಲ್ಲ ವಧಿಸುತ್ತಾ ಶ್ವೇತಕುಮಾರನನ್ನೂ ಯುದ್ಧಕ್ಕೆ ಆಹ್ವಾನಿಸುತ್ತಾನೆ. ಯುದ್ಧದಲ್ಲಿ ಶ್ವೇತಕುಮಾರ ಮಡಿಯುತ್ತಾನೆ. ಅಸುರ ಶ್ವೇತಕುಮಾರನ ಪತ್ನಿಯನ್ನು ಕದ್ದೊಯ್ದು ಸೆರೆಯಲ್ಲಿಡುತ್ತಾನೆ.
ಶ್ವೇತಕುಮಾರನ ಆತ್ಮ ನೇರವಾಗಿ ಯಮಲೋಕ ಸೇರುತ್ತದೆ. ಆತ ಮಾಡಿದ ಪುಣ್ಯ-ಪಾಪಗಳ ಲೆಕ್ಕವಾಗಿ ಆತನಿಗೆ 1 ವರ ಮತ್ತು ನರಕದಲ್ಲಿ ಶಿಕ್ಷೆ ನೀಡುವುದೆಂದು ನಿರ್ಧಾರವಾಗುತ್ತದೆ. 2ರಲ್ಲಿ ಒಂದನ್ನು ಮೊದಲು ಆರಿಸಿಕೊಳ್ಳಲು ಯಮಧರ್ಮ ಶ್ವೇತಕುಮಾರನಿಗೆ ಅವಕಾಶ ನೀಡಿದಾಗ ಆತ, ತನಗೆ ೊ ರಾತ್ರಿ ರಂಭೆಯ ಜೊತೆ ಕಳೆಯಬೇಕೆಂಬ ಬೇಡಿಕೆ ಮುಂದಿಡುತ್ತಾನೆ.
ಯಮದೂತರು ಆತನನ್ನು ರಂಭೆಯ ಅಂತಃಪುರಕ್ಕೆ ಬಿಡುತ್ತಾರೆ. ರಂಭೆಗೋ ಈತನನ್ನು ಕಂಡು ಒಂದೆಡು ಮರುಕ ಮತ್ತೊಂದೆಡೆ ಸಿಟ್ಟು. ತಾನು ಹೇಳಿದಂತೆ ಕೇಳಿದರೆ ಮಾತ್ರ ಆತನಿಗೆ ದೇಹಸುಖ ನೀಡುವುದಾಗಿ ರಂಭೆ ಷರತ್ತು ವಿಧಿಸುತ್ತಾಳೆ.
ಷರತ್ತು ಇಷ್ಟೆ "ಓಂ ನಮಃ ಶಿವಾಯ" ಎಂಬ ಮಂತ್ರವನ್ನು ರಂಭೆ ಸೂಚನೆ ಕೊಡುವವರೆಗೂ ಹೇಳುತ್ತಲೇ ಇರಬೇಕು. ಕೆಲವೇ ಕ್ಷಣಗಳಲ್ಲಿ ಶ್ವೇತಕುಮಾರ ಪಂಚಾಕ್ಷರೀ ಮಂತ್ರದಲ್ಲಿ ತಲ್ಲೀನನಾಗುತ್ತಾನೆ. ಬೆಳಗ್ಗೆ ಯಮದೂತರು ಬರುವವರೆಗೂ.
ಯಮದೂತರು ಶ್ವೇತಕುಮಾರನನ್ನು ಎಳೆದೊಯ್ಯಲು ಶಿವಗಣಗಳು ಬಂದು ಅವರನ್ನು ತಡೆಯುತ್ತಾರೆ. ಯಾವನೇ ವ್ಯಕ್ತಿ ಎಂಥ ಪಾಪ ಮಾಡಿದ್ದರೂ ಆತ ಶಿವಧ್ಯಾನ ಮಾಡಿದಲ್ಲಿ ಪಾಪದಿಂದ ವಿಮೋಚನೆ ಪಡೆಯುತ್ತಾನೆ. ಹೀಗಾಗಿ ಶ್ವೇತಕುಮಾರ ಶಿವಲೋಕಕ್ಕೆ ಬರುವುದೇ ಸರಿ ಎಂದು ಶಿವನ ಬಳಿ ಕರೆದೊಯ್ಯುತ್ತಾರೆ.
ಶಿವ ಶ್ವೇತಕುಮಾರನಿಗೆ ಮತ್ತೆ ಭೂಮಿಯಲ್ಲಿ ಜನಿಸುವಂತೆ ಅನುಗ್ರಹಿಸಿ "ನಿನ್ನನ್ನು ವಧಿಸಿದ ರಾಕ್ಷಸ ಒಮ್ಮೆ ಸತ್ತು ಬದುಕಿದವರಿಂದಲೇ ಸಾವು ಬರುವಂಥ ವರ ಪಡೆದಿದ್ದ. ಮತ್ತೆ ಭೂಮಿಯಲ್ಲಿ ಜನ್ಮ ತಳೆದು ಆ ಅಸುರನನ್ನು ವಧಿಸು" ಎಂದು ಶಿವ ಹರಸುತ್ತಾನೆ.
ಮತ್ತೆ ಭೂಮಿಗೆ ಬರುವ ಶ್ವೇತಕುಮಾರ ಅಸುರನನ್ನು ವಧಿಸಿ ತನ್ನ ರಾಜ್ಯವನ್ನು ಮತ್ತೆ ಸಂಪಾದಿಸಿಕೊಳ್ಳುತ್ತಾನೆ.
ಲೇಖನ: ಸಂಗೀತಾ ಪುತ್ತೂರು

Saturday, August 29, 2009

ಅಕಟಕಟಾ: ಶ್ರೀಕೃಷ್ಣ ಸಂಧಾನ ಯಶಸ್ವಿಯಾಯಿತು!

ಶ್ರೀಕೃಷ್ಣ ಸಂಧಾನದ ಕತೆ ಗೊತ್ತಿದೆಯಲ್ಲ? ಕೃಷ್ಣ ಎಷ್ಟೇ ಪ್ರಯತ್ನ ಮಾಡಿದರೂ ದುರ್ಯೋಧನ ಪಾಂಡವರಿಗೆ 5 ಗ್ರಾಮಗಳನ್ನು ಬಿಟ್ಟುಕೊಡಲು ಒಪ್ಪುವುದಿಲ್ಲ.

ಆದರೆ, ಒಮ್ಮೆ ತಾಳಮದ್ದಳೆಯೊಂದರಲ್ಲಿ ಎಡವಟ್ಟಾಯಿತು. ಯಾವುದೋ ಸಂಘದ ಸದಸ್ಯರು ತಾಳಮದ್ದಳೆ ಆಡಿಸಿದ್ದರು. ಆ ಊರಿನಲ್ಲಿ ಖ್ಯಾತನಾಮರಾದ ಶಿಕ್ಷಕರೊಬ್ಬರು ಶ್ರೀಕೃಷ್ಣ ಪಾತ್ರಧಾರಿಯಾಗಿ ಸಂಧಾನಕ್ಕೆ ಹೊರಟಿದ್ದರು. ದುರ್ಯೋಧನ ಪಾತ್ರ ಮಾಡಿದವನೋ ಮೇಷ್ಟರ ಪರಮ ಭಕ್ತ. ಮೇಷ್ಟರು ಹೇಳಿದ್ದನ್ನು ಚಾಚೂ ತಪ್ಪದೆ ನಡೆಸುವಾತ. ಆತನ ಸಮಸ್ಯೆ ಒಂದೇ, ಪರಮಾತ್ಮ ಹೊಟ್ಟೆಗಿಳಿಯದೆ ಕೆಲಸ ಆಗುವುದಿಲ್ಲ.

ತಾಳಮದ್ದಳೆಯಲ್ಲೂ ಹೀಗೇ ಆಯಿತು. ಪರಮಾತ್ಮನನ್ನು ಸೇವಿಸಿಕೊಂಡೇ ವೇದಿಕೆಯೇರಿದ್ದ ದುರ್ಯೋಧನ. ಶ್ರೀಕೃಷ್ಣ ಪಾತ್ರಧಾರಿ ಮೇಷ್ಟರು ಸಂಧಾನಕ್ಕೆ ಬಂದರು. ಒಂದಷ್ಟು ಹೊತ್ತು ವಾಗ್ಯುದ್ಧ ನಡೆಯಿತು.
ಕೊನೆಗೆ ದುರ್ಯೋಧನ, ಶ್ರೀಕೃಷ್ಣಾ ನೀನು ಹೇಳಿದಂತೆಯೇ ಆಗಲಿ. ಪಾಂಡವರಿಗೆ 5 ಗ್ರಾಮಗಳನ್ನು ಬಿಟ್ಟುಕೊಟ್ಟಿದ್ದೇನೆ ಎನ್ನಬೇಕೆ?
ನಂತರ ಯಾಕೆ ಹೇಗೆ ಮಾಡಿದೆ? ಎಂದರೆ ಆತನ ಉತ್ತರ ಏನು ಗೊತ್ತೆ ?- ಮೇಷ್ಟರು ಹೇಳಿದ ಮೇಲೆ ಇಲ್ಲಾ ಎನ್ನಲಾಗುತ್ತದೆಯೆ?
ಅಕಟಕಟಾ.... ಹೀಗೂ ಉಂಟಲ್ಲ ಎಂದು ಜನ ಉದ್ಘರಿಸಿದರು.

Sunday, August 23, 2009

ಬಲ್ಲಿರೇನಯ್ಯ: ಪೀಠಿಕಾ ಸ್ತ್ರೀಯರು

ಕ್ಷಗಾನದಲ್ಲಿ ಹಲವು ವೇಷಗಳು. ಪ್ರಸಂಗಕ್ಕೆ ಸಂಬಂಧಪಟ್ಟ ವೇಷಗಳು ಹಲವಿದ್ದರೆ, ಎಲ್ಲಾ ಪ್ರಸಂಗದ ಆರಂಭದಲ್ಲೂ ಕೆಲವು ಸಾಮ್ಯವಾದ ವೇಷಗಳು ಕಾಣಸಿಗುತ್ತವೆ. ಅವುಗಳಲ್ಲಿ ಮುಖ್ಯವಾದದ್ದ ಪೀಠಿಕಾ ಸ್ತ್ರೀಯರು.
ಪ್ರಸಂಗದ ಆರಂಭಕ್ಕೆ ಮುನ್ನ ಗಣೇಶನ ಸ್ತುತಿ ಮಾಡಲಾಗುತ್ತದೆ. ಭಾಗವತರು "ಗಜಮುಖ ನಾ ನಿನ್ನ..." ಎಂದು ಹಾಡಲು ಆರಂಭಿಸಿದೊಡನೆ ಪೀಠಿಕಾ ಸ್ತ್ರೀಯರು ರಂಗಸ್ಥಳ ಪ್ರವೇಶಿಸಿ ಗಣೇಶನಿಗೆ ನೃತ್ಯನಮನ ಸಲ್ಲಿಸುವುದು ಪದ್ಧತಿ.

Sunday, August 16, 2009

ರಂಗಾಂತರಂಗ: ಸ್ತ್ರೀವೇಷ ಸೆಟ್ ಅಥವಾ ಮಳೆಗಾಲದ ಸೆಟ್

ಇಂದಿನ ಪೀಳಿಗೆಯ ಬಹುತೇಕ ಮಂದಿಗೆ ಯಕ್ಷಗಾನ ಎಂದರೆ 4 ಗೋಡೆಗಳ ಮಧ್ಯೆ ನಡೆಯುವುದು ಎಂಬುದಷ್ಟೇ ಗೊತ್ತು. ಇದರಲ್ಲಿ ಮಳೆಗಾಲ ಮಾತ್ರ ಆಡುವ "ಸ್ತೀವೇಷ ಸೆಟ್" ಎಂದರೆ ಕೆಕರಾಮಕರಾ ನೋಡುವವರೇ ಹೆಚ್ಚು.
ಯಕ್ಷಗಾನ ಬಯಲಾಟಗಳು ಬೇಸಗೆಯಲ್ಲಿ ಮಾತ್ರ ನಡೆಯುತ್ತವೆ. ಹೀಗಾಗಿ, ಕಲಾವಿದರಿಗೆ ಮಳೆಗಾಲದಲ್ಲಿ ಕೆಲಸವಿರುವುದಿಲ್ಲ. ಮಳೆಗಾಲ ಜೀವನ ಸಾಗಿಸಬೇಕೆಂಬ ದೃಷ್ಟಿಯಿಂದ ಆರಂಭವಾದದ್ದು "ಮಲೆಗಾಲದ ಸೆಟ್".
ಯಕ್ಷಗಾನದ ಆರಂಭದ ಕಾಲದಲ್ಲಿ ಇದನ್ನು "ಸ್ತ್ರೀವೇಷದ ಸೆಟ್" ಎಂದು ಕರೆಯಲಾಗುತ್ತಿತ್ತು. ತೀರಾ ಇತ್ತೀಚಿನ ದಿನಗಳಲ್ಲಿ ಇವು ಮಳೆಗಾಲದ ಮೇಳಗಳಾಗಿ ಬದಲಾಗಿವೆ.
ಏನಿದು?: ಸ್ತ್ರೀ ವೇಷದ ಸೆಟ್ ಅಥವಾ ಮಳೆಗಾಲದ ಸೆಟ್ ಗಳಲ್ಲಿ ಕಲಾವಿದರ ದೊಡ್ಡ ತಂಡ ಇರುವುದಿಲ್ಲ. ಕೇವಲ 5 ಮಂದಿಯ 1 ತಂಡವಿರುತ್ತದೆ. ಇದರಲ್ಲಿ ಒಬ್ಬರು ಭಾಗವತರು, ಒಬ್ಬರು ಮದ್ದಳೆ, ಇನ್ನೊಬ್ಬರು ಶೃತಿ. ಮತ್ತಿಬ್ಬರು ವೇಷಧಾರಿಗಳು.
ಈ ವೇಷಧಾರಿಗಳು ಹೆಚ್ಚಾಗಿ ರಾಧಾ-ಕೃಷ್ಟ ಅಥವಾ ಕೃಷ್ಣ-ರುಕ್ಮಿಣಿ ವೇಷ ಧರಿಸುತ್ತಾರೆ. ಅಥವಾ ಶಿವ-ಪಾರ್ವತಿ, ರಾಮ-ಸೀತೆ ಮುಂತಾದ ವೇಷಗಳನ್ನು ಧರಿಸುವುದೂ ಇದೆ.
ಆಟ ಹೇಗಿರುತ್ತೆ?: ಈ ತಂಡಗಳು ಮನೆಮನೆಗೆ ಭೇಟಿ ಕೊಟ್ಟು ನಾಟ್ಯ ಮಾಡುವುದು ಪದ್ದತಿ. ಸಂಜೆಯ ವೇಳೆಗೆ ವೇಷದಾರಿಗಳು ವೇಷ ಧರಿಸಿ ಮನೆಮನೆಗೆ ಹೊರಡುತ್ತಾರೆ. ಪ್ರತಿ ಮನೆಯಲ್ಲೂ ಸುಮಾರು ಅರ್ಧ ಗಂಟೆ ಕಾಲ ಪ್ರದರ್ಶನ ನೀಡಲಾಗುತ್ತದೆ. 1 ರಾತ್ರಿಯಲ್ಲಿ ಸರಾಸರಿ 10 ಮನೆಗಳಿಗಷ್ಟೇ ಭೇಟಿ ನೀಡಲು ಸಾಧ್ಯ.
ಭಾಗವತರು 1 ಪಲ್ಲವಿ ಮತ್ತು 1 ಶೃತಿ ಪದ್ಯವನ್ನು ಹಾಡುತ್ತಾರೆ. ಈ ಹಾಡಿಗೆ ವೇಷಧಾರಿಗಳು ನಾಟ್ಯ ಮಾಡಿ ಪದ್ಯದ ಅರ್ಥ ಹೇಳುತ್ತಾರೆ. ಪದ್ಯಗಳು ವೇಷಕ್ಕೆ ಸಂಬಂಧಿಸಿದ್ದೇ ಇರುತ್ತದೆ. ಆಯಾ ಮನೆಗಳಲ್ಲಿ ಕೊಟ್ಟ ದುಡ್ಡು, ಅಕ್ಕಿ, ಬೇಳೆ ಮತ್ತಿತರ ದ್ರವ್ಯ-ವಸ್ತುಗಳೇ ಅವರ ಸಂಭಾವನೆ.
ಈಗ ಕಡಿಮೆಯಾಗಿದೆ: ಈ ತಂಡಗಳು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿವೆ. ಆದರೂ, ಕಾಸರಗೋಡು, ದಕ್ಷಿಣ ಕನ್ನಡದ ಕೆಲ ಭಾಗಗಳಲ್ಲಿ ಈಗಲೂ ಈ ತಂಡಗಳಿವೆ. ಬಹುತೇಕ ಕಲಾವಿದರು ಮೇಳಗಳನ್ನು ಕಟ್ಟಿಕೊಂಡು ವಿವಿಧ ಊರುಗಳಲ್ಲಿ 3 ಗಂಟೆಯ ಯಕ್ಷಗಾನ ಆಡುತ್ತಿರುವುದೂ ಈ ತಂಡಗಳು ಕಡಿಮೆಯಾಗಲು ಕಾರಣವಿರಬಹುದು.
ಲೇಖನ: ಕಾವ್ಯಶ್ರೀ

Sunday, August 9, 2009

ಪ್ರಸಂಗದ ಸುತ್ತ: ಬ್ರಹ್ಮಕಪಾಲ

ಬ್ರಹ್ಮಕಪಾಲ ಅಂದರೆ ಬ್ರಹ್ಮನ ಶಿರಸ್ಸು. ಅದರಲ್ಲೇನು ವಿಶೇಷ? ಎಲ್ಲರಿಗೂ ಇರುವಂತೆ ಅವನಿಗೂ 1
ತಲೆಯಿದೆ ಅಂತ ಸುಮ್ಮನಾಗಬೇಡಿ. ಬ್ರಹ್ಮ ಚತುರ್ಮುಖಿ (4 ತಲೆಯವ). ಬ್ರಹ್ಮಕಪಾಲ ಆತನ 5ನೇ
ತಲೆ. ಈ ತಲೆಯದ್ದು ವಿಶೇಷ ಕತೆ.
ಸತ್ಯಲೋಕದಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಲಾಗುತ್ತದೆ. ಇದಕ್ಕೆ ಕಾಮದೇವ
ಮನ್ಮಥ ಮತ್ತು ಲಯಕರ್ತ ಪರಮೇಶ್ವರನನ್ನು ಹೊರತುಪಡಿಸಿ ಉಳಿದವರೆಲ್ಲರಿಗೂ ಆಹ್ವಾನ
ಹೋಗುತ್ತದೆ. ಇವರಿಬ್ಬರನ್ನೂ ಬ್ರಹ್ಮ ಉದ್ದೇಶಪೂರ್ವಕ ಕಡೆಗಣಿಸಿರುತ್ತಾನೆ.
ವಿಷಯ ತಿಳಿನ ಮನ್ಮಥ ಮತ್ತು ಪರಮೇಶ್ವರ ಸತ್ಯಲೋಕದತ್ತ ತೆರಳುತ್ತಾರೆ. ಮೊದಲು ಮನ್ಮಥ ಬಂದ.
ಆ ಸಮಯದಲ್ಲಿ ಬ್ರಹ್ಮ ಮತ್ತು ಆತನ ಮಾನಸಪುತ್ರಿ ಸರಸ್ವತಿ ಸಂಭಾಷಣೆಯಲ್ಲಿ ತೊಡಗಿರುತ್ತಾರೆ.
ಬ್ರಹ್ಮ- ಮಗಳೇ, ನೀನು ಪ್ರಾಪ್ತ ವಯಸ್ಕಳಾಗಿದ್ದಿ. ನಿನ್ನನ್ನು ಒಬ್ಬ ಯೋಗ್ಯ ವರನಿಗೆ ಕೊಟ್ಟು ಮದುವೆ
ಮಾಡಬೇಕೆಂದಿದ್ದೇನೆ.
ಸರಸ್ವತಿ- ನಿನಗೆ ವಿವಾಹ ವಯಸ್ಸು ಮೀರಿದ್ದರೂ ಮದುವೆಯಾಗಿಲ್ಲವಲ್ಲ. ನೀನು ಯಾರನ್ನಾದರೂ
ಮದುವೆ ಮಾಡಿಕೊ. ಆಮೇಲೆ ನಾನು ಮದುವೆಯಾಗುತ್ತೇನೆ.
ಈ ಸಂಭಾಷಣೆ ಕೇಳಿಸಿಕೊಂಡ ಮನ್ಮಥ ಇಬ್ಬರ ಮೇಲೂ ಪುಷ್ಪಶರಗಳನ್ನು ಪ್ರಯೋಗಿಸುತ್ತಾನೆ.ಇದನ್ನರಿಯದ ಬ್ರಹ್ಮ...
ಬ್ರಹ್ಮ- ಮಗಳೇ ನಿನಗೆ ಎಂಥ ವರ ಬೇಕು?
ಸರಸ್ವತಿ- ಆತ ನಿನ್ನಂತೆಯೇ ಇರಬೇಕು.
ಬ್ರಹ್ಮ- ನನ್ನ ಪತ್ನಿಯೂ ನಿನ್ನಂತೆಯೇ ಇರಬೇಕೆಂಬುದು ನನ್ನ ಅಪೇಕ್ಷೆ. ಹಾಗಿದ್ದರೆ ನಾವಿಬ್ಬರೂ
ಮದುವೆಯಾಗಬಹುದಲ್ಲ..... ಈ ರೀತಿ ಸರಸ್ವತಿಯ ಪಾಣಿಗ್ರಹಣ ಮಾಡುತ್ತಾನೆ ಬ್ರಹ್ಮ.
ಅಲ್ಲಿಗೆ ಬಂದ ಪರಮೇಶ್ವರ ಇದನ್ನು ವಿರೋಧಿಸುತ್ತಾನೆ. "ಸರಸ್ವತಿ ನಿನ್ನ ಮಗಳು. ಆಕೆಯನ್ನು ನೀನು
ಹೇಗೆ ವಿವಾಹವಾಗುತ್ತಿ?" ಎಂದು ಪ್ರಶ್ನಿಸುತ್ತಾನೆ.
"ನನಗೆ ಬುದ್ಧಿ ಹೇಳಲು ನಿನ್ನಲ್ಲೇನು ಹೆಚ್ಚಿದೆ?" ಎಂದು ಬ್ರಹ್ಮ ಸವಾಲೆಸೆಯುತ್ತಾನೆ. ಹೀಗೆ ಚರ್ಚೆ
ಆರಂಭವಾಗಿ 1 ಹಂತದಲ್ಲಿ ಶಿವ "ನನ್ನಲ್ಲಿ 5 ತಲೆಯಿದೆ. ನಿನ್ನಲ್ಲಿ ನಾಲ್ಕೇ ಇರುವುದು. ನಾನು 5
ತಲೆಗಳಿಂದ ಯೋಚಿಸಬಲ್ಲೆ. ಹಾಗಾಗಿ ನಾನು ಹೇಳಿದ್ದು ಕೇಳು" ಎನ್ನುತ್ತಾನೆ.
ಇದು ಚತುರ್ಮುಖಿ ಬ್ರಹ್ಮನಿಗೆ ಭಾರೀ ಸವಾಲಾಗಿ ಆತ "ನಾನು ಸೃಷ್ಟಿಕರ್ತ. ಇನ್ನೊಂದು ಸೃಷ್ಟಿಸಬಲ್ಲೆ"
ಎಂದು 5ನೇ ತಲೆ ಸೃಷ್ಟಿಸುತ್ತಾನೆ. ಇದುವೇ ಬ್ರಹ್ಮಕಪಾಲ. ಶಿವ ಇದನ್ನು ತನ್ನ ಕೈಯಿಂದ ಕೀಳುತ್ತಾನೆ.
ಬ್ರಹ್ಮಕಪಾಲ ಶಿವನ ಬೆರಳನ್ನು ಕಚ್ಚಿ ಹಿಡಿದುಕೊಂಡು ರಕ್ತ ಹೀರಲಾರಂಭಿಸುತ್ತದೆ.
ಅದರಿಂದ ಬಿಡಿಸಿಕೊಳ್ಳಲಾಗದೆ ಊರೂರು ಸುತ್ತಿದ ಶಿವ ಕೊನೆಗೆ ವಿಷ್ಣುವಿನ ಬಳಿ ಬರುತ್ತಾನೆ. ವಿಷ್ಣು
"ಶಿವನ ಮೈಯಲ್ಲಿರುವ ರಕ್ತ ಇಂಗಿದೆ. ಬಾ ನನ್ನ ರಕ್ತ ಹೀರು" ಎಂದು ಬ್ರಹ್ಮಕಪಾಲವನ್ನು
ಆಹ್ವಾನಿಸುತ್ತಾನೆ. ಬ್ರಹ್ಮಕಪಾಲ ಶಿವನನ್ನು ಬಿಟ್ಟು ವಿಷ್ಣುವಿನತ್ತ ನುಗ್ಗುತ್ತದೆ. ಶಿವ ತಪ್ಪಿಸಿಕೊಳ್ಳುತ್ತಾನೆ.
ವಿಷ್ಣು ಬ್ರಹ್ಮಕಪಾಲವನ್ನು ಅತ್ತಿಂದಿತ್ತ ಅಲೆದಾಡಿಸಿ ಕೊನೆಗೆ "ದ್ವಾಪರಯುಗದಲ್ಲಿ ಮಹಾಯುದ್ಧ
ನಡೆಯಲಿದೆ. ಆಗ ನಿನಗೆ ರಕ್ತತರ್ಪಣ ನೀಡುತ್ತೇನೆ. ಅಲ್ಲಿಯವರೆಗೆ ತಾಳ್ಮೆಯಿಂದಿರು" ಎಂದು ಮನವಿ
ಮಾಡುತ್ತಾನೆ. ಬ್ರಹ್ಮಕಪಾಲ ಒಪ್ಪುತ್ತದೆ.
ಮಹಾಭಾರತ ಯುದ್ಧದಲ್ಲಿ ಈ ಬ್ರಹ್ಮಕಪಾಲಕ್ಕೆ ಕೃಷ್ಣನಾಗಿ ಅವತರಿಸಿದ್ದ ವಿಷ್ಣು ರಕ್ತತರ್ಪಣ ನೀಡುತ್ತಾನೆ.

Sunday, August 2, 2009

ಅಕಟಕಟಾ: ಚಂಡ-ಮುಂಡರ ಚರ್ಚೆಯೇ?

ರಂಗಸ್ಥಳದ ಮೇಲೆ 2 ಪಾತ್ರಗಳು ಸಂಭಾಷಣೆ ನಡೆಸುವಾಗ ಆ ಪಾತ್ರಧಾರಿಗಳ ವೈಯಕ್ತಿಕ ವಿಚಾರವೂ
ಪ್ರಸಂಗಕ್ಕೆ ಸರಿಹೊಂದುವ ರೀತಿಯಲ್ಲಿ ಚರ್ಚೆಯಾಗುವುದುಂಟು. ಆದರೆ, ಇಂಥ ಸೂಕ್ಷ್ಮಗಳು ಪ್ರೇಕ್ಷಕನ
ಗಮನಕ್ಕೆ ಬರುವುದೇ ಇಲ್ಲ.( ಪಾತ್ರಧಾರಿಗಳ ವೈಯಕ್ತಿಕ ವಿಚಾರ ತಿಳಿದಿಲ್ಲ ಎಂದಾದರೆ ಮಾತ್ರ.) ಇಂಥ
ಒಂದು ಪ್ರಸಂಗ ನಮ್ಮ ಓದುಗರಿಗಾಗಿ....
ಅದು ದೇವಿಮಹಾತ್ಮೆ ಪ್ರಸಂಗ. ಚಂಡ-ಮುಂಡ, ಶುಂಭ-ನಿಶುಂಭ, ರಕ್ತಬೀಜಾದಿ ರಾಕ್ಷಸರ
ಸಂಹಾರಕ್ಕಾಗಿ ಮಹಾಮಾಯೆ ಶಾಂಭವೀ ರೂಪವನ್ನು ತಾಳಿ ವೃಂದಾವನದಲ್ಲಿ ನೆಲೆಸಿರುತ್ತಾಳೆ. ಶುಂಭ
ದೊರೆಯ ಆಜ್ಞೆಯಂತೆ ದೇವಿಯನ್ನು ಶುಂಭನನ್ನು ವರಿಸುವಂತೆ ಒಪ್ಪಿಸಿ ಕರೆತರುವುದಕ್ಕಾಗಿ
ಚಂಡ-ಮುಂಡರು ವೃಂದಾವನದತ್ತ ಸಾಗುತ್ತಾರೆ.
ಅಖಂಡ ಬ್ರಹ್ಮಚಾರಿಗಳೆಂದೇ ಖ್ಯಾತಿ ಪಡೆದ ಚಂಡ-ಮುಂಡರು ದೇವಿಯ ಅಂದ, ಲಾವಣ್ಯವನ್ನು ಕಂಡು
ಮೋಹಗೊಳ್ಳುತ್ತಾರೆ. ಅಷ್ಟುಮಾತ್ರವಲ್ಲ ತಾವೇ ಆಕೆಯನ್ನು ವರಿಸಬೇಕೆಂದು ವಾಂಛಿತರಾಗಿ ಬಂದ
ಕಾರ್ಯವನ್ನು ಮರೆಯುತ್ತಾರೆ. "ಆಕೆಯನ್ನು ನಾನು ಮದುವೆಯಾಗುವುದು" ಎಂದು ಇಬ್ಬರೂ
ವಾಗ್ಯುದ್ಧವನ್ನೇ ಆರಂಭಿಸುತ್ತಾರೆ. ಇದು ಪ್ರಸಂಗದ ಕಥೆ. ವಿಶೇಷ ಇರುವುದೇ ಚಂಡ-ಮುಂಡರ
ವಾಗ್ಯುದ್ಧದಲ್ಲಿ.
ಪ್ರಸಂಗದಲ್ಲಿ ಚಂಡ-ಮುಂಡರ ಪಾತ್ರದಲ್ಲಿದ್ದವರು ನಿಜ ಜೀವನದಲ್ಲಿ ಹಾವು-ಮುಂಗುಸಿ. ಅವರಲ್ಲೊಬ್ಬರು
(ವಿವಾಹಿತ) (ಮುಂಡನ ಪಾತ್ರಧಾರಿ) ಯುವತಿಯೋರ್ವಳೊಂದಿಗೆ (ಅವಿವಾಹಿತೆ- ಸ್ಪಷ್ಟವಾಗಲಿ ಎಂದು
ವಿವರಿಸಿದ್ದು.) ಸಂಬಂಧ ಹೊಂದಿದ್ದರು. ಅಥವಾ ಅವರಿಬ್ಬರ ನಡುವೆ ಸಮಾಜ ಸಂಬಂಧ ಕಲ್ಪಿಸಿತ್ತು
ಎಂದರೂ ಅಡ್ಡಿಯಿಲ್ಲ. ಈ ವಿಚಾರ ರಂಗಸ್ಥಳದಲ್ಲಿ ಚಂಡ-ಮುಂಡರ ವಾಗ್ಯುದ್ಧದಲ್ಲಿ ಬರಬೇಕೆ!
ಚಂಡ ಮಾತಿನ ಮಧ್ಯದಲ್ಲಿ "ಅಲ್ವಯ್ಯಾ...! ಪರಸಸ್ತ್ರೀಯನ್ನು ಬಯಸುತ್ತೀಯಲ್ಲವೇ? ನಿನಗೆ ಸಂಸ್ಕಾರ
ಅನ್ನುವುದು ಸ್ವಲ್ಪವಾದರೂ ಇದೆಯೆ?" ಎಂದ.
ಮುಂಡ ಸುಮ್ಮನಿರುತ್ತಾನೆಯೆ? "ಪರಸ್ತ್ರೀ ಅನ್ನುವುದು ಯಾರಿಗೆ? ಆಕೆಗೆ ಯಾವನಾದರೂ
ಪುರುಷನೊಂದಿಗೆ ವಿವಾಹವಾಗಿರಬೇಕು. ಆದರೆ, ಈಕೆಗೆ ವಿವಾಹವಾಗಿಲ್ಲ. ಈಕೆಯಿನ್ನೂ ಕುಮಾರಿ.
ಪರಸ್ತ್ರೀ ಹೇಗಾಗುತ್ತಾಳೆ?" ಎಂದು ಚಂಡನ ಬಾಯಿ ಮುಚ್ಚಿಸಿದ....!

Sunday, July 26, 2009

ಬಲ್ಲಿರೇನಯ್ಯ: ಚೌಕಿ

ಕ್ಷಗಾನದ ಒಂದು ಪ್ರಸಂಗವನ್ನು ಆಡಲು ಬೇಕಾದ ಎಲ್ಲಾ ರಂಗಸಜ್ಜಿಕೆ ನಡೆಯುವುದು ಚೌಕಿಯಲ್ಲಿ.
ಅರ್ಥಾತ್ ಗ್ರೀನ್ ರೂಮ್. ಈ ಚೌಕಿಗೂ ಅದರದ್ದೇ ಆದ ನಿಯಮವಿದೆ. ಎಲ್ಲೆಂದರಲ್ಲಿ ಕುಳಿತು ಬಣ್ಣ
ಹಚ್ಚಿಕೊಳ್ಳುವ ಪದ್ಧತಿ ಯಕ್ಷಗಾನದಲ್ಲಿ ಇಲ್ಲ.
ಒಬ್ಬೊಬ್ಬ ವೇಷಧಾರಿಗೆ ಅವರದ್ದೇ ಆದ ಸ್ಥಳ ಇದೆ. ಇದನ್ನು ಯಕ್ಷಗಾನದ ಭಾಷೆಯಲ್ಲಿ ಮೊದಲ ಪೆಟ್ಟಿಗೆ
2ನೇ ಪೆಟ್ಟಿಗೆ........ ಎಂದು ಸೂಚಿಸಲಾಗುತ್ತದೆ. ಅಂದರೆ ಇವು ವೇಷಕ್ಕೆ ಬೇಕಾದ ಬಣ್ಣ ಮತ್ತಿತರ
ಸಾಮಗ್ರಿಗಳನ್ನು ತುಂಬಿರುವ ಪೆಟ್ಟಿಗೆಗಳ ಸಂಖ್ಯೆಗಳು. ಈ ವೇಷಗಳು ಕಲಾವಿದರ ವೃತ್ತಿಹಿರಿತನದ
ಆಧಾರದ ಮೇಲೆ ಅವಲಂಬಿಸಿವೆ.
ಮೊದಲ ಪೆಟ್ಟಿಗೆ ಬಣ್ಣದ ವೇಷಧಾರಿಗೆ ಸೇರಿದ್ದು, ಅಂದರೆ ಆತ ವೃತ್ತಿಯಲ್ಲಿ ಎಲ್ಲರಿಗಿಂತ ಹಿರಿಯ
ನಂತರದ ಪೆಟ್ಟಿಗೆಗಳ ಸರಣಿ ಈ ಕೆಳಗಿನಂತಿದೆ.
1. ಬಣ್ಣದ ವೇಷಧಾರಿ (ಹೆಚ್ಚಾಗಿ ರಾಕ್ಷಸ ವೇಷಗಳು)
2. ಎದುರು ವೇಷಧಾರಿ (ಬಣ್ಣದ ವೇಷಧಾರಿಯ ವಿರುದ್ಧ ಪಕ್ಷದಲ್ಲಿರುವ ಮುಖಂಡರು)
3. ಪೀಠಿಕೆ ವೇಷಧಾರಿಗಳು (ಪ್ರಸಂಗದ ಆರಂಭದಲ್ಲಿ ಪೀಠಿಕೆಯನ್ನು ನಿರ್ವಹಿಸುವ ಪಾತ್ರಗಳು. ಉದಾ:
ದೇವೇಂದ್ರ, ಅರ್ಜುನ ಇತ್ಯಾದಿ)
4. ಸ್ತ್ರೀವೇಷಧಾರಿಗಳು
5. ಪುಂಡುವೇಷ (ಕಿರೀಟ ಇಲ್ಲದ ವೇಷಗಳು. ಉದಾ: ಋಷಿಗಳು)
6. ಬಲ ವೇಷಧಾರಿಗಳು (ಸಖೀ ಪಾತ್ರಧಾರಿಗಳು, ಗಣಗಳು ಇನ್ನಿತರ ಸಣ್ಣಪುಟ್ಟ ವೇಷಧಾರಿಗಳು)
7. ಅಡ್ಡ ಚೌಕಿ- ಹಾಸ್ಯಗಾರರದ್ದು.
ಅಡ್ಡಚೌಕಿ: ಮೇಳದಲ್ಲಿ ಹಾಸ್ಯಗಾರರಿಗೆ ಯಾವತ್ತೂ ವಿಶೇಷ ಸ್ಥಾನಮಾನ. 1 ಪ್ರಸಂಗದ ಕಳೆ ಹೆಚ್ಚಿಸುವ,
ಪ್ರೇಕ್ಷಕರನ್ನು ಸೆಳೆದಿಟ್ಟುಕೊಳ್ಳುವ ಎಲ್ಲಾ ಜವಾಬ್ದಾರಿಯೂ ಇವರದ್ದೇ. ಹೀಗಾಗಿ, ಉಳಿದ
ವೇಷಧಾರಿಗಳು ಮೇಳದ ದೇವರ ಎದುರು ಉದ್ದ ಸಾಲುಗಳಲ್ಲಿ ಕುಳಿತರೆ, ಹಾಸ್ಯಗಾರರು ಅಡ್ಡಕ್ಕೆ,
ಅಂದರೆ ದೇವರಿಗೆ ಮುಖ ಹಾಕಿ ಕುಳಿತುಕೊಳ್ಳುತ್ತಾರೆ.
ಲೇಖನ: ವಿದ್ಯಾಶಂಕರಿ

Sunday, July 19, 2009

ರಂಗಾಂತರಂಗ: ಕೊಕ್ಕಡ ಈಶ್ವರ ಭಟ್ಟ




ಕಾಸರಗೋಡೂ ಸೇರಿದಂತೆ ದಕ್ಷಿಣೋತ್ತರ ಜಿಲ್ಲೆಗಳ ಜೀವಾಳವಾಗಿರುವ ಯಕ್ಷಗಾನದ ತೆಂಕು-ಬಡಗು
ತಿಟ್ಟುಗಳಲ್ಲಿ ಸ್ತ್ರೀಪಾತ್ರಕ್ಕೆ ಜೀವ ತುಂಬಿದ ಪ್ರಮುಖರಲ್ಲಿ ಕೊಕ್ಕಡ ಈಶ್ವರ ಭಟ್ಟರೂ ಒಬ್ಬರು. ನಯ
ನಾಜೂಕಿನ ಸ್ತ್ರೀಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ ಭಟ್ಟರು ಪ್ರಸ್ತುತ ನಿವೃತ್ತಿ ಜೀವನ
ನಡೆಸುತ್ತಿದ್ದಾರೆ.
ಆಗಿನ ಪುತ್ತೂರು ತಾಲೂಕಿನ (ಈಗ ಬಂಟ್ವಾಳ ತಾಲೂಕು) ಅಳಿಕೆ ಗ್ರಾಮದ ಮುಳಿಯ
ಕಡೆಂಗೋಡ್ಲುವಿನಲ್ಲಿ ಕೆ. ಮಹಾಲಿಂಗ ಭಟ್ಟ ಮತ್ತು ಪರಮೇಶ್ವರಿ ದಂಪತಿಯ ಪುತ್ರನಾಗಿ 1941ರಲ್ಲಿ
ಜನಿಸಿದ ಭಟ್ಟರು 6ನೇ ತರಗತಿಗೇ ವಿದ್ಯಾಭ್ಯಾಸ ಮೊಟಕುಗೊಳಿಸಿದರು.
ಬದುಕು ನಡೆಸುವ ಅನಿವಾರ್ಯತೆಯಿಂದ ತಮ್ಮ 15-16ರ ವಯಸ್ಸಿನಲ್ಲಿ ಯಕ್ಷಗಾನ ಕ್ಷೇತ್ರಕ್ಕೆ
ಧುಮುಕಿದರು. ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ಮೂಲ್ಕಿ, ಸಾಲಿಗ್ರಾಮ ಸೇರಿದಂತೆ ಹಲವಾರು
ಮೇಳಗಳಲ್ಲಿ ಕರ್ತವ್ಯ ನಿರ್ವಹಿಸಿದ ಭಟ್ಟರು ಪ್ರಸ್ತುತ ಕೊಕ್ಕಡ ಸಮೀಪದ ಹೆನ್ನಾಳ ಎಂಬಲ್ಲಿ
ವಾಸವಾಗಿದ್ದಾರೆ.
ಇತ್ತೀಚೆಗಷ್ಟೇ ಹೃದಯದ ಬೈಪಾಸ್ ಸರ್ಜರಿ ಮಾಡಿಸಿಕೊಂಡ ಕಾರಣ ಭಟ್ಟರು ವೃತ್ತಿ ಜೀವನಕ್ಕೆ
ವಿದಾಯ ಹೇಳಿದ್ದಾರೆ.
ಲೇಖನ: ಕಾವ್ಯಶ್ರೀ

Sunday, July 12, 2009

ಪ್ರಸಂಗದ ಸುತ್ತ: ಶಾಂಭವೀ ವಿಲಾಸ


ದೇವಿ ಮಹಾತ್ಮೆಯಲ್ಲಿ ಶಾಂಭವೀ ವಿಲಾಸ ಅತೀ ಮುಖ್ಯವಾದ ಉಪಪ್ರಸಂಗ. ಹಲಾವರು ಘೋರ
ರಾಕ್ಷಸರನ್ನು ದೇವಿ ಸಂಹರಿಸುವ ಕಥೆ ಇದರಲ್ಲಿದೆ.
ಷೋಣಿತಾಪುರದಲ್ಲಿ (ರಾಕ್ಷಸಲೋಕದ ರಾಜಧಾನಿ) ಧೂಮ್ರಾಕ್ಷ, ಚಂಡ-ಮುಂಡ, ಶುಂಭ-ನಿಶುಂಭ,
ರಕ್ತಬೀಜಾದಿ ರಾಕ್ಷಸರ ಜನನವಾಗುತ್ತದೆ. ಶುಂಭ ರಾಕ್ಷಸರ ದೊರೆ. ನಿಶುಂಭ ಆತನ ತಮ್ಮ. ರಕ್ತಬೀಜ
ಪ್ರಧಾನಮಂತ್ರಿ. 14 ಲೋಕಗಳನ್ನು ವಶಪಡಿಸಿಕೊಳ್ಳುವ ಹೆಬ್ಬಯಕೆಯಲ್ಲಿ ರಾಕ್ಷಸರು ಬ್ರಹ್ಮನ ಕುರಿತು
ತಪಸ್ಸನ್ನಾಚರಿಸಿ ವರ ಪಡೆಯುತ್ತಾರೆ.
ವರಬಲದಿಂದ ಕೊಬ್ಬಿದ ರಾಕ್ಷಸರಿಂದ ಉಪಟಳ ಶುರು. ಭೂಮಿ, ಪಾತಾಳಗಳನ್ನು ಗೆದ್ದ ಶುಂಭದೊರೆ
ಸ್ವರ್ಗಲೋಕದತ್ತ ಧಾವಿಸುತ್ತಾನೆ. ಇಂದ್ರ ಸೋತು ಸುಣ್ಣವಾಗುತ್ತಾನೆ. ಶ್ರೀಹರಿಯನ್ನು ಪ್ರಾರ್ಥಿಸುತ್ತಾನೆ.
ಶ್ರೀಹರಿ ಆದಿಮಾಯೆಯನ್ನು ಸ್ತುತಿಸುವಂತೆ ಸೂಚಿಸುತ್ತಾನೆ.
ಆದಿಮಾಯೆ ಶಾಂಬವೀ ರೂಪವನ್ನು ತಾಳಿ ಮಹೇಂದ್ರಗಿರಿಯಲ್ಲಿ ನೆಲೆಸುತ್ತಾಳೆ. ಗಾಯನ ಮಾಡುತ್ತಾ
ರಾಕ್ಷಸರನ್ನು ತನ್ನತ್ತ ಸೆಳೆಯುತ್ತಾಳೆ. ಆಕೆಯ ಬಗ್ಗೆ ಮಾಹಿತಿ ಪಡೆದ ಶುಂಭ ದೊರೆ ಆಕೆಯನ್ನು ವರಿಸುವ
ಅಪೇಕ್ಷೆಯಲ್ಲಿ ದೂತನ ಮುಖಾಂತರ ಸುದ್ದಿ ಕಳುಹಿಸುತ್ತಾಳೆ. ಇದಕ್ಕೆ ಅಸಮ್ಮತಿ ಸೂಚಿಸಿದ ಶಾಂಭವಿ
"ಶುಂಭನೇ ಬರಲಿ ಶಂಭುವೇ ಬರಲಿ ಹೆದರಲಾರೆ" ಎಂದು ಹೇಳಿ ಕಳುಹಿಸುತ್ತಾಳೆ.
ಇಷ್ಟಕ್ಕೇ ಶುಂಭ ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ, ಮದೋನ್ಮತ್ತನಾದ ಆತ ಧೂಮ್ರಾಕ್ಷನನ್ನು
ಕಳುಹಸುತ್ತಾಳೆ. ದೇವಿ ತನ್ನ ಕಣ್ಣ ನೋಟ ಮಾತ್ರದಿಂದಲೇ ಆತನ್ನು ಸುಟ್ಟು ಬೂದಿ ಮಾಡುತ್ತಾಳೆ.
ನಂತರ ಅಖಂಡ ಬ್ರಹ್ಮಚಾರಿಗಳೆಂದೇ ಖ್ಯಾತಿ ಪಡೆದ ಚಂಡ-ಮುಂಡರ ಸರದಿ.
ಬ್ರಹ್ಮಚಾರಿಗಳಾಗಿರುವವರೆಗೆ ಸಾವು ಬಾರದಂತೆ ಅವರು ವರ ಪಡೆದಿದ್ದರು. ಆದರೆ, ದೇವಿಯನ್ನು
ನೋಡಿದೊಡನೆ ಮನಸ್ಸಿನಲ್ಲಿ ಮೋಹ, ಕಾಮನೆಗಳು ಹುಟ್ಟಿಕೊಂಡು ಬ್ರಹ್ಮಚರ್ಯವನ್ನು
ಭಂಗಗೊಳಿಸಿದವು.
ಆದರೆ, ಚಂಡ-ಮುಂಡರನ್ನು ಸುಲಭದಲ್ಲಿ ವಧಿಸುವುದು ಅಸಾಧ್ಯ. ಅದಕ್ಕಾಗಿ ದೇವಿ ಭದ್ರಕಾಳಿಯಾಗಿ
ರೂಪಾಂತರ ಹೊಂದಿ ಅವರ ಶಿರವನ್ನು ಚೆಂಡಾಡುತ್ತಾಳೆ.
ಕ್ರೋಧಾವಿಷ್ಟನಾದ ಶುಂಭ ತಾನೇ ಹೊರಡಲು ಅಣಿಯಾಗುತ್ತಾನೆ. ರಕ್ತಬೀಜ ಆತನನ್ನು ತಡೆದು ಬುದ್ಧಿ
ಹೇಳುತ್ತಾನೆ. ಆದರೂ ಕೇಳಿಸಿಕೊಳ್ಳದೆ ರಕ್ತಬೀಜನನ್ನೇ ಲೇವಡಿ ಮಾಡುತ್ತಾನೆ. ಕಡೆಗೆ ರಕ್ತಬೀಜ
ತಾನು ಹೋಗುವುದಾಗಿ ಹೇಳಿ ದೇವಿ ಇರುವ ಸ್ಥಳಕ್ಕೆ ಬರುತ್ತಾನೆ.
ರಕ್ತಬೀಜ ಭೂಮಿಗೆ ಸೋಕಿದ ಆತನ ರಕ್ತದ ಹನಿಯಷ್ಟು ರಾಕ್ಷಸರು ಹುಟ್ಟುವಂಥ ವರ ಪಡಿದಿದ್ದ. ದೇವಿ
ರಕ್ತೇಶ್ವರಿಯಾಗಿ ಆತನನ್ನು ಕೊನೆಗಾಣಿಸುತ್ತಾಳೆ. ನಂತರ ನಿಶುಂಭನನ್ನೂ ಯಮಪುರಿಗೆ ಅಟ್ಟುತ್ತಾಳೆ.
ತನ್ನವರೆಲ್ಲರೂ ಮಡಿದ ಹತಾಶೆಯಿದ್ದರೂ ದೇವಿಯನ್ನು ವರಿಸಲೇಬೇಕೆಂಬ ಉತ್ಕಟಾಪೇಕ್ಷೆಯಲ್ಲಿ ಬರುವ
ಶುಂಭನನ್ನು ಶಾಂಭವಿಯಾಗಿ ವಧಿಸುತ್ತಾಳೆ.
ಲೇಖನ: ಪ್ರದೀಪ

Sunday, July 5, 2009

ಅಕಟಕಟಾ: ಮೇನಕೆ ಪ್ರಸಂಗ

ರಂಗಸ್ಥಳದಲ್ಲಿನ ಸ್ತ್ರೀಪಾತ್ರಧಾರಿಗಳನ್ನು ಸ್ತ್ರೀಯೆಂದೇ ಭ್ರಮಿಸುವ ಪ್ರಸಂಗಗಳು ಹಲವು. ಅದರಲ್ಲೂ
ಯಕ್ಷಗಾನದ ಒಳ-ಹೊರಗನ್ನು ಅರಿತಿಲ್ಲದವರೇ ಈ ರೀತಿ ಭ್ರಮೆಗೊಳಗಾಗುತ್ತಾರೆ. ಒಮ್ಮೆ
ಹೀಗಾಗಿತ್ತು...
ಬೆಂಗಳೂರಿನ ಕಾಳದಾಸ ಲೇಔಟ್. ರಮೇಶ್ ಚಂದ್ರ ನ್ಯಾಯವಾದಿಗಳ ಮನೆ "ಹಂಸಿಕೆ"ಯ
ಗೃಹಪ್ರವೇಶ. ಈ ಪ್ರಯುಕ್ತ ವಿಶ್ವಾಮಿತ್ರ-ಮೇನಕೆ ಆಟ ಹಮ್ಮಿಕೊಳ್ಳಲಾಗಿತ್ತು. ನಾರಾಯಣ
ಶಬರಾಯರ ಭಾಗವತಿಕೆ. ಅಷ್ಟಾವಧಾನಿ ವಸಂತ ಭಾರದ್ವಾಜರ ವಿಶ್ವಾಮಿತ್ರ, ಬೇಗಾರು
ಶಿವಕುಮಾರ್ ಮೇನಕೆ. ವಿಶೇಷ ಇರುವುದು ಇಲ್ಲಲ್ಲ. ನಂತರ ನಡೆದ ಸನ್ಮಾನ ಸಮಾರಂಭದಲ್ಲಿ.
ಮಾಜಿ ಶಾಸಕ, ಹಿರಿಯ ನ್ಯಾಯವಾದಿ ಸುಬ್ಬಾರೆಡ್ಡಿಯವರು ಕಲಾವಿದರನ್ನು ಸನ್ಮಾನಿಸುತ್ತಿದ್ದರು.
ಒಬ್ಬೊಬ್ಬ ಕಲಾವಿದರನ್ನೂ ಸರದಿಯಂತೆ ಗೌರವಿಸುತ್ತಾ ಮೇನಕೆ ಪಾತ್ರಧಾರಿ ಬೇಗಾರರ ಸರದಿ
ಬಂತು. ಮೇನಕೆಯ ವೇಷದಲ್ಲೇ ಬೇಗಾರು ವೇದಿಕೆಗೆ ಬಂದರು.
ಎಲ್ಲಾ ಕಲಾವಿದರಿಗೂ ಹಾರ ಹಾಕಿ, ಶಾಲು ಹೊದೆಸಿ ಗೌರವಿಸಿದ್ದ ಸುಬ್ಬಾರೆಡ್ಡಿಯವರು ಈ ಬಾರಿ
ಮಾತ್ರ ಸ್ವಲ್ಪ ಹಿಂಜರಿದರು. ಎಲ್ಲಾ ಕಾಣಿಕೆಗಳನ್ನೂ ಕೈಗಿತ್ತು... "ಅಮ್ಮಾ ಮೇನಕೆ... ತುಂಬಾ ಚೆನ್ನಾಗಿ
ಅಭಿನಯಿಸಿದ್ದೀಯಮ್ಮ. ನಿನಗೆ ದೇವರು ಒಳ್ಳೆಯದು ಮಾಡಲಿ" ಎಂದು ಹರಸಿದರು.
ಪರಿಸ್ಥಿತಿಯನ್ನು ಅರ್ಥೈಸಿಕೊಂಡ ರಮೇಶ್ ಚಂದ್ರ ನ್ಯಾಯವಾದಿಗಳು "ಅದು ಸ್ತ್ರೀ ಪಾತ್ರದಲ್ಲಿರುವ
ಪುರುಷ. ಬೇಗಾರು ಶಿವಕುಮಾರ್" ಎಂದು ಪರಿಚಯಿಸಿದಾಗ ರೆಡ್ಡಿಯವರು ತಬ್ಬಿಬ್ಬು. ಮತ್ತೆ
ಬೇಗಾರರನ್ನು ಹತ್ತಿರ ಕರೆದು ಗೌರವಿಸಿದರು ಸುಬ್ಬಾ ರೆಡ್ಡಿಯವರು.
(ಈ ಮಾಹಿತಿಯನ್ನು ಸ್ವತಃ ಬೇಗಾರು ಶಿವಕುಮಾರ್ ಧೀಂಕಿಟ ಬಳಗಕ್ಕೆ ನೀಡಿದ್ದಾರೆ.)

Sunday, June 28, 2009

ಬಲ್ಲಿರೇನಯ್ಯ: ರಂಗಸ್ಥಳ





ರಂಗಸ್ಥಳಕ್ಕೆ ಅದರದ್ದೇ ಆದ ಚೌಕಟ್ಟಿದೆ. 4 ಕಂಬಗಳನ್ನು ನಿಲ್ಲಿಸಿದೊಡನೆ ರಂಗಸ್ಥಳವಾಗುವುದಿಲ್ಲ.
ರಂಗಸ್ಥಳ ಅರ್ಧಚಂದ್ರಾಕಾರದಲ್ಲಿ ಇರುವುದು ಪುರಾತನಕಾಲದಿಂದ ನಡೆದು ಬಂದದ್ದು. ಆದರೆ, ಚೌಕ,
ಷಟ್ಕೋನ ಆಕಾರಗಳಲ್ಲಿಯಾ ರಂಗಸ್ಥಳವಿರುತ್ತದೆ.
ರಂಗಸ್ಥಳದ ಉದ್ದ ಅಗಲವೂ ಇಂತಿಷ್ಟೇ ಇರಬೇಕೆಂಬ ನಿಯಮವಿದೆ. ರಂಗಸ್ಥಳದ ಮುಂಭಾಗಲ್ಲಿ 10
ಅಡಿಗಳಷ್ಟಿದ್ದರೆ, ಹಿಂಭಾಗದ ಉದ್ದ 12 ಅಡಿ ಇರಬೇಕು.
ರಂಗಸ್ಥಳಕ್ಕೆ ವೇಷವೊಂದು ಇದೇ ರೀತಿ ಪ್ರವೇಶಿಸಬೇಕು, ಹಿಮ್ಮೇಳದವರು ಇಂಥದ್ದೇ ಸ್ಥಳದಲ್ಲಿ
ಕೂರಬೇಕು ಎಂಬ ನಿಯಮವೂ ಇದೆ. ಪ್ರಖ್ಯಾತ ಕಲಾವಿದ ಸೂರಿಕುಮೇರಿ ಗೋವಿಂದ ಭಟ್ಟರ
ಆತ್ಮಕಥೆ ಯಕ್ಷೋಪಾಸನೆಯಲ್ಲಿ ಸೂಚಿಸಿದಂತೆ ರಂಗಸ್ಥಳದ ಪರಿಕಲ್ಪನೆಯನ್ನು ಇಲ್ಲಿ ಕೊಡಲಾಗಿದೆ.
1.ಭಾಗವತರು
2.ಮದ್ದಳೆ
3.ಚೆಂಡೆ
4.ಶೃತಿ
5.ಚಕ್ರತಾಳ
ವೇಷದ ಪ್ರವೇಶ ಎಡಗಡೆಯಿಂದಿ ಅಂದರೆ ಚೆಂಡೆಯವರು ನಿಂತಿರುವ ಬದಿಯಿಂದ ಆಗಬೇಕು ಮತ್ತು
ಬಲಗಡೆಯಿಂದ ಅಂದರೆ ಮದ್ದಳೆಯವರು ಕೂತಿರುವ ಕಡೆಯಿಂದ ನಿರ್ಗಮಿಸಬೇಕು.
ಮಾಹಿತಿ: ಈಶ್ವರಚಂದ್ರ ನಿಡ್ಲೆ

Sunday, June 21, 2009

ರಂಗಾಂತರಂಗ: ಸೂರಿಕುಮೇರಿ ಗೋವಿಂದ ಭಟ್ಟ


ಕ್ಷಗಾನದ ಮೇರುಪ್ರತಿಭೆಗಳ ಪೈಕಿ ಸೂರಿಕುಮೇರಿ ಗೋವಿಂದ ಭಟ್ಟರೂ ಒಬ್ಬರು. ಅವರು ಕೇವಲ
ಯಕ್ಷಗಾನ ಕಲಾವಿರಾಗಿಯಷ್ಟೇ ಮಿಂಚಿದವರಲ್ಲ. ಪ್ರಸಂಗಕರ್ತರಾಗಿಯೂ ಹಲವಾರು ಪ್ರಸಂಗಗಳನ್ನು
ರಚಿಸಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಕ್ಕೆ ಮನೆ ಎಂಬಲ್ಲಿ ಕೆ. ಶಂಕರನಾರಾಯಣ ಭಟ್ಟ ಮತ್ತು
ಕೆ. ಲಕ್ಷ್ಮೀ ಅಮ್ಮ ದಂಪತಿಯ ಪುತ್ರನಾಗಿ 1940ರ ಮಾರ್ಚ್ 22ರಂದು ಜನಿಸಿದ ಭಟ್ಟರು ಹೆಚ್ಚು
ವಿದ್ಯಾಭ್ಯಾಸ ಪಡೆದವರಲ್ಲ.
ವಿಟ್ಲದ ಕೋಡಪದವಿನಲ್ಲಿ 7ನೇ ತರಗತಿವರೆಗೆ ವ್ಯಾಸಂಗ ಮಾಡಿದ ಗೋವಿಂದ ಭಟ್ಟರು
ಆಯ್ದುಕೊಂಡದ್ದು ಯಕ್ಷಗಾನ ಕ್ಷೇತ್ರವನ್ನು. ಭಟ್ಟರು ಕುರಿಯ ವಿಠಲ ಶಾಸ್ತ್ರಿಗಳಲ್ಲಿ ಯಕ್ಷಗಾನ
ನೃತ್ಯಾಭ್ಯಾಸವನ್ನೂ, ಪರಮಶಿವನ್, ಮಾಧವ ಮೆನನ್, ರಾಜನ್ ಅಯ್ಯರ್ ಅವರಲ್ಲಿ ಹಲವಾರು
ಪ್ರಕಾರಗಳ ನೃತ್ಯಗಳನ್ನೂ ಅಭ್ಯಾಸ ಮಾಡಿದರು. 1951ರಲ್ಲಿ ಮೇಳಕ್ಕೆ ಸೇರಿದರು.
ಗೋವಿಂದ ಭಟ್ಟರ ಬಾಳಸಂಗಾತಿಯಾಗಿ ಬಂದ ಸಾವಿತ್ರಿ ಪತಿಯ ಕಲಾಸೇವೆಗೆ ತಮ್ಮ ಕೈಲಾದಷ್ಟು
ಪ್ರೋತ್ಸಾಹವನ್ನೂ ನೀಡಿದರು.
ಭಟ್ಟರು ಹಲವಾರು ಬಾರಿ ವಿದೇಶಗಳಿಗೆ ಪ್ರವಾಸ ಹೋಗಿ ಅಲ್ಲಿ ಯಕ್ಷಗಾನ ಆಟವನ್ನು ಆಡಿದ್ದೂ ಇದೆ.
ಅವರ ಜೀವನದ ಕೆಲವು ಮಹತ್ವದ ವಿವರಗಳು ಇಲ್ಲಿವೆ:
ತಿರುಗಾಟದ ಮೇಳಗಳು: ಮೂಲ್ಕಿ, ಕೂಡ್ಲು, ಸುರತ್ಕಲ್, ಇರಾ, ಧರ್ಮಸ್ಥಳ. ಪ್ರಸ್ತುತ ಧರ್ಮಸ್ಥಳ
ಮೇಳದ ಹಿರಿಯ ಕಲಾವಿದ.
ವಿದೇಶ ಪ್ರವಾಸ: ಅಬುಧಾಬಿ (1988), ದುಬೈ (1988), ಬಹ್ರೈನ್ (1991), ಜಪಾನ್ (1994)
ರಚಿಸಿದ ಪ್ರಸಂಗಗಳು: ಮಣಿಮೇಖಲೆ, ಕನಕಲೇಖೆ, ಕಾವೇರಿ ಮಹಾತ್ಮೆ, ಮೂರೂವರೆ ವಜ್ರಗಳು,
ರಾಜಶೇಖರ ವಿಲಾಸ, ನಹುಷೇಂದ್ರ, ಸಮ್ರಾಟ್ ಅಶೋಕ.
ಆತ್ಮಕಥನ: ಯಕ್ಷೋಪಾಸನೆ
ಲೇಖನ: ಈಶ್ವರಚಂದ್ರ ನಿಡ್ಲೆ

Sunday, June 14, 2009

ಪ್ರಸಂಗದ ಸುತ್ತ: ಮಹಿಷಾಸುರ ಮರ್ದಿನಿ

ದು ದೇವಿ ಮಹಾತ್ಮೆಯ ಮತ್ತೊಂದು ಉಪಪ್ರಸಂಗ. ಮಹಿಷಾಸುರನ ಜನನದಿಂದ ಸಾವಿನ ವರೆಗಿನ ಕಥಾ ಹಂದರವನ್ನು ಇದು ಒಳಗೊಂಡಿದೆ.
ವಿದ್ಯುನ್ಮಾಲಿ ಮತ್ತು ಮಾಲಿನಿ ರಾಕ್ಷಸ ದಂಪತಿಗೆ ಬಹುಕಾಲ ಮಕ್ಕಳಿರಲಿಲ್ಲ. ಹೇಗಾದರೂ ಪುತ್ರಪ್ರಾಪ್ತಿಯಾಗಲೇಬೇಕೆಂದು ನಿರ್ಧರಿಸಿದ ಮಾಲಿನಿ ತಪಸ್ಸನ್ನಾಚರಿಸಲು ನಿರ್ಧರಿಸುತ್ತಾಳೆ. ಕಾಡಿಗೆ ತೆರಳಿ ಮಹಿಷಿ ಅಂದರೆ ಎಮ್ಮೆಯ ರೂಪದಲ್ಲಿ ತಪಸ್ಸಿಗೆ ತೊಡಗುತ್ತಾಳೆ.
ಆಕೆಯ ಕಠೋರ ತಪಸ್ಸಿನಿಂದ ಹೊಮ್ಮುವ ಶಾಖ ಋಷಿಯೊಬ್ಬನ ತಪಸ್ಸಿಗೆ ಭಂಗ ತರುತ್ತದೆ. ಇದರಿಂದ ಕೋಪಾವಿಷ್ಠನಾದ ಋಷಿ ಜ್ಞಾನದೃಷ್ಟಿಯಿಂದ ಮಾಲಿನಿ ತಪಸ್ಸನ್ನಾಚರಿಸುವುದನ್ನು ತಿಳಿದುಕೊಳ್ಳುತ್ತಾನೆ. "ಮಹಿಷಿಯ ರೂಪದಲ್ಲಿ ತಪಸ್ಸಾನಚರಿಸುತ್ತಿರುವುದರಿಂದ ನಿನ್ನ ಹೊಟ್ಟೆಯಲ್ಲಿ ಮಹಿಷ ಅಂದರೆ ಕೋಣವೇ ಜನ್ಮತಾಳಲಿ" ಎಂದು ಶಪಿಸುತ್ತಾನೆ.
ಇದರ ಫಲವೇ ಮಹಿಷಾಸುರನ ಜನನ. ಮಹಿಷಾಸುರ ಬೆಳಯುತ್ತಿದ್ದ. ಒಮ್ಮೆ ವಿದ್ಯುನ್ಮಾಲಿ ದೇವೇಂದ್ರನ ಮೇಲೆ ಯುದ್ಧ ಸಾರುತ್ತಾನೆ. ಯುದ್ಧದಲ್ಲಿ ವಿದ್ಯುನ್ಮಾಲಿಯ ಸೇನೆ ಸೋತು, ಆತ ಸಾವನ್ನಪ್ಪುತ್ತಾನೆ. ಇದರ ಸೇಡು ತೀರಿಸಿಕೊಳ್ಳಲು ಬಾಲಕ ಮಹಿಷ ಹೊರಟಾಗ ಮಾಲಿನಿ ತಡೆದು, ತಪಸ್ಸನ್ನಾಚರಿಸಿ ಶಕ್ತಿ ಸಂಪಾದಿಸಿಕೊಳ್ಳುವಂತೆ ಮಹಿಷನಿಗೆ ಸೂಚಿಸುತ್ತಾಳೆ.
ಅದರಂತೆ ತಪಸ್ಸನ್ನಾಚರಿಸಿ ಸಿಂಹವನ್ನು ಪಳಗಿಸಬಲ್ಲ ಹೆಣ್ಣಿನ ಹೊರತಾಗಿ ಬೇರಾರಿಂದಲೂ ಸಾವು ಬಾರದಂತಹ ವರ ಪಡೆಯುತ್ತಾನೆ. ವರಬಲದಿಂದ ಕೊಬ್ಬಿದ ಮಹಿಷ ದೇವಾದಿ ದೇವತೆಗಳನ್ನು ಸೋಲಿಸುತ್ತಾರೆ. ದೇವತೆಗಳು ಯಥಾಪ್ರಕಾರ ತ್ರಿಮೂರ್ತಿಗಳ ಮೊರೆ ಹೋಗುತ್ತಾರೆ. ತ್ರಿಮೂರ್ತಿಗಳು ಆದಿಮಾಯೆಯನ್ನು ಸ್ತುತಿಸಲು ಸೂಚಿಸುತ್ತಾರೆ.
ಸಿಂಹವಾಹಿನಿಯಾಗಿ ಪ್ರಕಟಗೊಳ್ಳುವ ಆದಿಮಾಯೆ ಮಹಿಷಾಸುರನನ್ನು ಕೊನೆಗಾಣಿಸುತ್ತಾಳೆ. ಅಲ್ಲಿಂದ ತರುವಾಯ ಆಕೆ, ಮಹಿಷಾಸುರಮರ್ದಿನಿಯಾಗಿ ಭಕ್ತರ ಹೃದಯಮಂದಿರದಲ್ಲಿ ನೆಲೆಸುತ್ತಾಳೆ.
ಇದು ಮಹಿಷಾಸುರಮರ್ದಿನಿ ಪ್ರಸಂಗ. ಇದನ್ನು ಆಡಲು ಕನಿಷ್ಠ 3 ಗಂಟೆಯಾದರೂ ಬೇಕು.
ಲೇಖನ: ಸಂಗೀತಾ ಪುತ್ತೂರು

Sunday, June 7, 2009

ಅಕಟಕಟಾ: ಸ್ತ್ರೀಪಾತ್ರಧಾರಿಗೆ ಲೇಡಿ ಸೆಕ್ಯೂರಿಟಿ!!!!

ಬ್ಬ ಸ್ತ್ರೀಪಾತ್ರಧಾರಿಗೆ ಲೇಡಿ ಪೊಲೀಸರ ಭದ್ರತೆ ಕೊಟ್ಟರೆ, ಅವರನ್ನು ತಪಾಸಣೆ ಮಾಡಲು ಲೇಡಿ
ಪೊಲೀಸರೇ ಬಂದರೆ ಹೇಗಾದೀತು?
ತಮಾಷೆಯಲ್ಲ. ಈ ಪ್ರಸಂಗ ನಡೆದದ್ದು, ಪ್ರಸಂಗ ತೆಂಕು-ಬಡಗು ತಿಟ್ಟುಗಳೆರಡರಲ್ಲೂ ಸಮರ್ಥವಾಗಿ
ಪಾತ್ರಪೋಷಣೆ ಮಾಡಿದ ಸೀಮಾತೀತ ಕಲಾವಿದ ಬೇಗಾರು ಶಿವಕುಮಾರ್ ಅವರ ಬದುಕಿನಲ್ಲಿ.
(ಬೇಗಾರು ಅವರ ವೃತ್ತಿ, ಪ್ರವೃತ್ತಿ ಮತ್ತಿತರ ವಿಚಾರಗಳ ಬಗೆಗಿನ ಲೇಖನಗಳನ್ನು ಮುಂದಿನ ದಿನಗಳಲ್ಲಿ
ಪ್ರಕಟಿಸಲಾಗುವುದು.)
1991ರಲ್ಲಿ ನವದೆಹಲಿಯಲ್ಲಿ "ಫೂಲ್ ವಾಲೋಂಕಿ ಫೇರ್" ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ರಸಿದ್ಧ ಸ್ತ್ರೀ ವೇಷಧಾರಿ ಬೇಗಾರು ಶಿವಕುಮಾರ್ ಅವರೂ ಇದರಲ್ಲಿ ಭಾಗವಹಿಸಿದ್ದರು.
ಭಾಗವಹಿಸಿದ್ದ ಎಲ್ಲಾ ಕಲಾವಿದರಿಗೂ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಭದ್ರತಾ ತಪಸಣೆಯಂತೂ
ಇದ್ದದ್ದೇ... ಬೇಗಾರು ಸ್ತ್ರೀವೇಷ ಧರಿಸಿ ಸಮಾರಂಭದ ವೇದಿಕೆತ್ತ ಹೆಜ್ಜೆ ಹಾಕುತ್ತಿದ್ದಂತೆ ಅವರ ಜೊತೆ
ಜೊತೆಗೆ ಲೇಡಿ ಪೊಲೀಸರೂ ಆಗಮಿಸಿದರು. ಬೇಗಾರು ಅವರ ರಕ್ಷಣೆಗೆ. ಬೇಗಾರು ಅವರಿಗೆ ಗೊಂದಲ.
ಇವರೇಕೆ ತಮಗೆ ರಕ್ಷಣೆ ನೀಡುತ್ತಿದ್ದಾರೆ?
ಸಮಾರಂಭದ ವೇದಿಕೆ ಬಳಿ ಬಂದಾಗ ಭದ್ರತಾ ತಪಾಸಣೆಗೂ ಲೇಡಿ ಪೊಲೀಸರೇ ಆಗಮಿಸಿದರು.
ಬೇಗಾರು ಅವರ ಮನದಲ್ಲಿ "ಎಡವಟ್ಟಾಯ್ತಲ್ಲ..." ಎಂಬ ಭಾವ. ತಕ್ಷಣವೇ ಅಲ್ಲಿಗೆ ಬಂದ ಸಮಾರಂಭದ
ಆಯೋಜಕರು "ಯೇ ಔರತ್ ನಹೀ... ಆದಮೀ ಹೈ" ಎಂದಾಗ ಲೇಡಿ ಪೊಲೀಸರಿಗೆ ಅಚ್ಚರಿ.
ಸಮಾರಂಭದಲ್ಲಿ ನೆರೆದವರೆಲ್ಲ ಕಕ್ಕಾಬಿಕ್ಕಿ.
(ಈ ಘಟನೆಯನ್ನು ಸ್ವತಃ ಬೇಗಾರು ಶಿವಕುಮಾರ್ ಅವರೇ ಧೀಂಕಿಟ ಬಳಗದ ಜೊತೆ
ಹಂಚಿಕೊಂಡಿದ್ದಾರೆ. ಯಕ್ಷಗಾನ ಕಲೆಯನ್ನೇ ಉಸಿರಾಗಿಸಿಕೊಂಡ ಬೇಗಾರು ಅವರು ಧೀಂಕಿಟಕ್ಕೆ
ನೀಡುತ್ತಿರುವ ಸಹಕಾರಕ್ಕೆ ನಾವು ಆಭಾರಿ.)

Sunday, May 31, 2009

ಬಲ್ಲಿರೇನಯ್ಯ: ಚೆಂಡೆ ವಾದಕರು

ಕ್ಷಗಾನ ಹಿಮ್ಮೆಳದ ಮತ್ತೊಂದು ಪ್ರಮುಖ ಪಾತ್ರ ಚೆಂಡೆ ವಾದಕರದ್ದು. ಆಯಾ ರಾಗಕ್ಕೆ ತಕ್ಕುನಾಗಿ
ಚೆಂಡೆಯನ್ನು ನುಡಿಸುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಚೆಂಡೆ ವಾದಕರೂ ಸಾಕಷ್ಟು ಅಧ್ಯಯನ
ಮಾಡಬೇಕು.
ತೆಂಕುತಿಟ್ಟಿನ ಚೆಂಡೆಯನ್ನು ನಿಂತುಕೊಂಡು ಬಾರಿಸಲಾಗುತ್ತದೆ, ಚೆಂಡೆಯ ಎರಡೂ ಬದಿಯ ಅಗಲ
ಒಂದೇ. ತೆಂಕಿನ ಚೆಂಡೆ ನುಡಿಸುವುದು ಅಷ್ಟು ಸುಲಭವಲ್ಲ. ಹೆಗಲಿಗೇರಿಸಿಕೊಂಡು ಚೆಂಡೆಕೋಲಿನಿಂದ
ಚೆಂಡೆಗೆ ಬಾರಿಸಿದ ಮಾತ್ರಕ್ಕೆ ಅದರಿಂದ ಸ್ವರ ಹೊರಡುವುದಿಲ್ಲ.
ಚೆಂಡೆ ವಾದಕರು ರಾಗ ತಾಳಗಳ ಸ್ಪಷ್ಟ ಜ್ಞಾನ ಹೊಂದಿರಬೇಕು. ಎಲ್ಲೆಲ್ಲಿ ಯಾವ್ಯಾವುದು
ಬಳಸಬೇಕೆಂಬುದೂ ಅರಿವಿರಬೇಕು. ಇಲ್ಲವಾದಲ್ಲಿ ಚೆಂಡೆ ವಾದಕ ಸೋಲುವುದು ಖಂಡಿತ.
ಹಲವಾರು ಚೆಂಡೆವಾದಕರು ಯಕ್ಷಗಾನ ಕ್ಷೇತ್ರದಲ್ಲಿ ಮಿಂಚಿದ್ದಾರೆ. ಈಗಲೂ ಮಿಂಚುತ್ತಿರುವವರು
ಸಾಕಷ್ಟು ಮಂದಿ. ಇಹಲೋಕ ತ್ಯಜಿಸಿದರೂ ತಮ್ಮ ಪ್ರಭಾವವನ್ನು ಉಳಿಸಿರುವವರು ಬಹಳಷ್ಟು ಮಂದಿ
ಇದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಇತ್ತೀಚೆಗಷ್ಟೇ ನಿಧನರಾದ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು.
ಕೆಲವು ಚೆಂಡೆವಾದಕರು: ಯಕ್ಷಗಾನ ಕ್ಷೇತ್ರದಲ್ಲಿ ಚೆಂಡೆವಾದಕರು ಬಹಳಷ್ಟು ಮಂದಿ ಇದ್ದಾರೆ. ಎಲ್ಲರ
ಹೆಸರನ್ನೂ ಉಲ್ಲೇಖಿಸುವುದು ಕಷ್ಟ. ಹಾಗಾಗಿ, ಸಂದರ್ಭಕ್ಕೆ ಅನುಗುಣವಾಗಿ ಕೆಲವು ಹೆಸರುಗಳನ್ನಷ್ಟೇ
ಪ್ರಸ್ತಾಪಿಸುತ್ತೇನೆ. ಎಲ್ಲಾ ಕಲಾವಿದರ ಬಗೆಗಿನ ಬರೆಹಗಳನ್ನೂ ಮುಂದಿನ ದಿನಗಳಲ್ಲಿ ಧೀಂಕಿಟದಲ್ಲಿ
ಓದಬಹುದು.
ಪ್ರಮುಖರು:
1. ಚಿಪ್ಪಾರು ಕೃಷ್ಣಯ್ಯ ಬಲ್ಲಾಳ
2.ಪದ್ಯಾಣ ಶಂಕರನಾರಾಯಣ ಭಟ್ಟ
3.ಆಡೂರು ಗಣೇಶ ರಾವ್
4.ದೇನಂತಮಜಲು ಸುಬ್ರಹ್ಮಣ್ಯ ಭಟ್ಟ
ಬರೆಹ: ಕಾರ್ತಿಕ್ ನಿಡ್ಲೆ

Sunday, May 24, 2009

ರಂಗಾಂತರಂಗ: ಹೊಸನಗರ ಮೇಳ


ತೀರಾ ಇತ್ತೀಚೆಗೆ ಆರಂಭವಾದ ಮೇಳಗಳ ಪೈಕಿ ಹೊಸನಗರ ಮೇಳ ಪ್ರಮುಖವಾದುದು.
ಶ್ರೀರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಈ ಮೇಳಕ್ಕೆ ಉಜಿರೆ
ಅಶೋಕ್ ಭಟ್ ವ್ಯವಸ್ಥಾಪಕರಾಗಿದ್ದಾರೆ.
ಪೌರಾಣಿಕ ಪ್ರಸಂಗಗಳನ್ನು ಸಮರ್ಥವಾಗಿ ಆಡುವವರು ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲೇ ಜನ್ಮ
ತಳೆದ ಈ ಮೇಳ ಪೌರಾಣಿಕ ಜ್ಞಾನ ಹೊಂದಿರುವ ಹಲವಾರು ಕಲಾವಿದರನ್ನು ಒಳಗೊಂಡಿದೆ. ಹೀಗಾಗಿ,
ಪೌರಾಣಿಕ ಪ್ರಸಂಗಗಳನ್ನು ಆಡುವವರಿಲ್ಲ ಎಂಬ ಕೊರಗನ್ನು ಇದು ನಿವಾರಿಸಿದೆ.
ಪದ್ಯಾಣ ಗಣಪತಿ ಭಟ್ (ಭಾಗವತರು) ಮತ್ತಿತರ ಹಿಮ್ಮೇಳ ಕಲಾವಿದರ ತಂಡ ಮೇಳಕ್ಕೆ ಮೆರುಗು
ನೀಡಿದೆ. ಹಲವಾರು ಹಿರಿ-ಕಿರಿಯ (ಎಲ್ಲಾ ಹೆಸರುಗಳನ್ನೂ ಇಲ್ಲಿ ಉಲ್ಲೇಖಿಸುವುದ ಕಷ್ಟ. ಹೀಗಾಗಿ
ಮೇಳದ ಕಲಾವಿದರ ಬಗೆಗೆ ಮುಂದಿನ ದಿನಗಳಲ್ಲಿ ಬರೆಯಲಾಗುವುದು.) ಕಲಾವಿದರು ಮುಮ್ಮೇಳವನ್ನು
ಬೆಳಗುತ್ತಿದ್ದಾರೆ.
ಈಗಾಗಲೇ ನಾಡಿನೆಲ್ಲೆಡೆ ತನ್ನ ಛಾಪು ಬೀರಿರುವ ಹೊಸನಗರ ಮೇಳ, ರಾಘವೇಶ್ವರ ಶ್ರೀಗಳ
ನೇತೃತ್ವದಲ್ಲಿ ತನ್ನ ಯಶಸ್ಸನ್ನು ಮುಂದುವರಿಸಿಕೊಂಡು ಹೋಗಲಿ ಎಂಬುದು ಕಲಾಪ್ರೇಮಿಗಳ ಆಶಯ.
ಜೈ ಗುರುದೇವ.
ಲೇಖನ: ಸಂಗೀತಾ ಪುತ್ತೂರು

Sunday, May 17, 2009

ಪ್ರಸಂಗದ ಸುತ್ತ: ಮಧು-ಕೈಟಭ ವಧೆ

ಧು-ಕೈಟಭ ವಧೆ ದೇವಿ ಮಹಾತ್ಮೆಯ ಉಪಪ್ರಸಂಗ. ದೇವಿಮಹಾತ್ಮೆಯ ಆರಂಭದಲ್ಲೇ
ಮಧು-ಕೈಟಭರ ವಧೆ ಬರುತ್ತದೆ.
ಸೃಷ್ಟಿಯ ಆದಿಯಲ್ಲಿ ಭೂಮಿ ಎಂಬುದೇ ಇರುವುದಿಲ್ಲ. ಈ ಪ್ರಸಂಗದಲ್ಲಿ ತ್ರಿಮೂರ್ತಿಗಳಲ್ಲಿ
ದೊಡ್ಡವರಾರೆಂಬ ವಾಗ್ಯುದ್ಧ ನಡೆಯುವುದು ಮತ್ತು ಮಧು-ಕೈಟಭರ ಜನನವಾಗುವಲ್ಲಿಯವರೆಗೆ
ದೇವಿಮಹಾತ್ಮೆ ಪ್ರಸಂಗದಲ್ಲೇ ವಿವರಿಸಲಾಗಿದೆ. ಹೀಗಾಗಿ ಅದನ್ನು ಮತ್ತೆ ವಿವರಿಸಲು ಹೋಗುವುದಿಲ್ಲ.
ಮಲಗಿದ್ದ ವಿಷ್ಣು ತನ್ನ ಕಿವಿಯಿಂದ ಕಲ್ಮಶ (ವ್ಯಾಕ್ಸ್) ಅನ್ನು ತೆಗೆದೆಸೆದಾಗ ಅದರಿಂದ ಮಧು-ಕೈಟಭರು
ಹುಟ್ಟಿಕೊಳ್ಳುತ್ತಾರೆ. ಸಾಮಾನ್ಯವಾಗಿ ಎಲ್ಲರಲ್ಲೂ ಇರುವ ತಪ್ಪು ಭಾವನೆ ಎಂದರೆ ಮಧು-ಕೈಟಭರು
ರಾಕ್ಷಸರು ಎಂಬುದು. ಆದರೆ, ಅವರು ರಾಕ್ಷಸರಲ್ಲ. ವಿಷ್ಣುವೇ ಅವರ ಅಪ್ಪ.
ಹಸಿವಿನಿಂದ ಕಂಗೆಟ್ಟ ಮಧು-ಕೈಟಭರು ಬ್ರಹ್ಮನನ್ನು ತಿನ್ನಲು ಮುಂದಾದಾಗ ಬ್ರಹ್ಮ ವಿಷ್ಣುವನ್ನು
ಪ್ರಾರ್ಥಿಸುತ್ತಾನೆ. ಬ್ರಹ್ಮನನ್ನು ರಕ್ಷಿಸಲೋಸುಗ ವಿಷ್ಣು ಮಧು-ಕೈಟಭರೊಂದಿಗೆ ಯುದ್ಧ ಆರಂಭಿಸುತ್ತಾನೆ.
ವಿಷ್ಣು ಒಬ್ಬ, ಮಧು-ಕೈಟಭರು ಇಬ್ಬರು. ಮಧುವಿಗೆ ಸುಸ್ತಾದಾಗ ಕೈಟಭ, ಕೈಟಭನಿಗೆ ಸುಸ್ತಾದಾಗ
ಮಧು ಎಂದು ಪಾಳಿಯಲ್ಲಿ ಯುದ್ಧ ಮುಂದುವರಿಸುತ್ತಾರೆ.
ವಿಷ್ಣು ಒಬ್ಬನೇ ಸೆಣಸುತ್ತಾ ಒಂದು ಹಂತದಲ್ಲಿ ಸೋಲಿನ ಭೀತಿಯನ್ನು ಎದುರಿಸುತ್ತಾನೆ. ದಿಕ್ಕು ತೋಚದೆ
ಆದಿ ಮಾಯೆಯನ್ನು ಸ್ತುತಿಸುತ್ತಾನೆ. ಆದಿಮಾಯೆ ಆಕಾಶದಲ್ಲಿ ಮಾಯೆಯ ರೂಪದಲ್ಲಿ ಕಾಣಿಸಿಕೊಂಡು
ಮಧು-ಕೈಟಭರಲ್ಲಿ ಚಂಚಲತೆ ಮೂಡಿಸುತ್ತಾಳೆ. ಯುದ್ಧದಲ್ಲಿ ಇರಬೇಕಾದ ಏಕಾಗ್ರತೆ ತಪ್ಪಿ ಹೋಗುತ್ತದೆ.
ಆಗ ವಿಷ್ಣು ಅವರನ್ನು ಘಾಸಿಗೊಳಿಸುತ್ತಾನೆ.
ಸಾವಿನ ನೋವಲ್ಲಿ ನರಳುತ್ತಿದ್ದ ಮಧು-ಕೈಟಭರಿಗೆ ಜನ್ಮ ರಹಸ್ಯವನ್ನು ತಿಳಿಸಿ ಅನುಗ್ರಹಿಸುತ್ತಾನೆ. ಸಾವು
ಬಂತೆಂದು ನೀವು ಮರುಗಬೇಕಿಲ್ಲ. ಲೋಕದ ಸೃಷ್ಟಿಗಾಗಿ ನಿಮ್ಮ ಕೊಡುಗೆ ಅಗತ್ಯವಿತ್ತು ಎಂದು ಅವರ
ಚರ್ಮದಿಂದ ಭೂಮಿಯನ್ನು ನಿರ್ಮಿಸುತ್ತಾನೆ.


ಬರೆಹ: ದಿವ್ಯಶ್ರೀ ಬದಿಯಡ್ಕ

Sunday, May 10, 2009

ಅಕಟಕಟಾ...!: 40 ಮೀಟರ್ ಹಾರಬಲ್ಲೆ...!

ಕ್ಷಗಾನ ಆಟ ಕೂಟಗಳಲ್ಲಿ ಏನೋ ಹೇಳಬಾಕಾದಲ್ಲಿ ಬಾಯ್ತಪ್ಪಿ ಮತ್ತೇನೋ ಹೇಳುವುದು ಇದೆ.
ಇಂಥ ಅಚಾತುರ್ಯಗಳು ನಡೆದಾಗ ಸಹಕಲಾವಿದರು ಅದನ್ನು ಸರಿಪಡಿಸಿಕೊಂಡು ಹೋಗುತ್ತಾರೆ.
ಹಾಸ್ಯ ಕಲಾವಿದರಾದರೆ ಕೇಳುವುದೇ ಬೇಡ. ನಗೆಬುಗ್ಗೆ ಚಿಮ್ಮಿಸಿ ಬಿಡುತ್ತಾರೆ.
ಅದರಲ್ಲೂ ಹೊಸದಾಗಿ ರಂಗಪ್ರವೇಶ ಮಾಡುವವರಿಗೆ ಬಾಯ್ತಪ್ಪುವುದು ಜಾಸ್ತಿ. ಒಂದು ಬಾರಿ ಹೀಗೇ
ಆಗಿತ್ತು.
ಆಗಷ್ಟೇ ಯಕ್ಷಗಾನ ನಾಟ್ಯ, ಅರ್ಥಗಾರಿಕೆ ಕಲಿತು ರಂಗಪ್ರವೇಶ ಮಾಡುತ್ತಿದ್ದ ಹುಡುಗ. ಪ್ರಸಂಗ
ಸಮುದ್ರಲಂಘನ (ರಾಮಾಯಣದ ಉಪಪ್ರಸಂಗ).
ಸುಗ್ರೀವ ವಾನರ, ಭಲ್ಲೂಕ ಸೇನೆಯನ್ನು 4 ವಿಭಾಗ ಮಾಡಿ 4 ದಿಕ್ಕುಗಳಿಗೆ ಕಳುಹಿಸುತ್ತಾನೆ. ಇದರಲ್ಲಿ
ದಕ್ಷಿಣದತ್ತ ಹೊರಟ ಸೇನೆಗೆ ಸೀತೆ ಲಂಕೆಯಲ್ಲಿರುವ ವಿಚಾರ ತಿಳಿದುಬರುತ್ತದೆ. ಲಂಕೆಯಲ್ಲಿ ಸೀತೆ
ಇದ್ದಾಳೋ? ಇಲ್ಲವೋ? ಎಂಬುದನ್ನು ತಿಳಿಯಲು ಅಲ್ಲಿಗೇ ಹೋಗಬೇಕು. ಆಗ ಜಾಂಬವಂತ ಎಲ್ಲರನ್ನೂ
ನೀವೆಷ್ಟು ದೂರ ಹಾರಬಲ್ಲಿರಿ? ಎಂದು ಕೇಳುತ್ತಾನೆ.
ನಮ್ಮ ಹುಡುಗ ಅಂಗದನ ಪಾತ್ರಧಾರಿ. ಜಾಂಬವಂತನ ಪಾತ್ರದಲ್ಲಿದ್ದವರು ಮಹಾನ್ ಹಾಸ್ಯ ಕಲಾವಿದ
ಪೆರುವಡಿ ನಾರಾಯಣ ಭಟ್ಟರು.
ಸರಿ. ಜಾಂಬವಂತರು ಅಂಗದಲ್ಲಿ ಕೇಳಿದರು...
"ಅಂಗದಾ ನೀನೆಷ್ಟು ದೂರ ಹಾರಬಲ್ಲೆ?"
ಅಂಗದ ಉತ್ತರಿಸಿದ..."ಜಾಂಬವಂತರೇ... 40 ಮೀಟರ್ ಹಾರಬಲ್ಲೆ"
ಹಾಸ್ಯಕಲಾವಿದರು ಇಂಥ ವಿಷಯ ಸಿಕ್ಕರೆ ಬಿಟ್ಟಾರೆ? "ಅಂಗದ... 40 ಮೀಟರ್ ಹಾರಿದರೆ ಲಂಕೆಗೆ
ಬಿಡು, ಈ ಸಭೆಯಿಂದ ಹೊರ ಹೋಗುವುದಿಲ್ಲ" ಎಂದು ನೆರೆದವರನ್ನೆಲ್ಲ ನಗೆಗಡಲಲ್ಲಿ ಮುಳುಗಿಸಿದರು.
ಅಂಗದ ಪಾತ್ರಧಾರಿ ಮಾಡಿದಂಥ ಅಚಾತುರ್ಯಗಳು ಆಗಾಗ ನಡೆಯುತ್ತವೆ. ಅದು ಸಾಮಾನ್ಯ.
ಹಾಗಂತ, ತಪ್ಪುಗಳನ್ನು ತಿದ್ದಿಕೊಳ್ಳದೇ ಇರುವುದು ಸರಿಯಲ್ಲ.

Sunday, May 3, 2009

ಬಲ್ಲಿರೇನಯ್ಯ: ಭಾಗವತರು

ಭಾಗವತರು- ಯಕ್ಷಗಾನದ ಮುಖ್ಯ ಸೂತ್ರಧಾರಿ. ಸಮಸ್ತ ಪ್ರಸಂಗ ಇವರ ನೇತೃತ್ವದಲ್ಲೇ
ನಡೆಯುವುದು. ಯಕ್ಷಗಾನ ಪದ್ಯವನ್ನು ರಾಗ ಸಮೇತ ಹಾಡುವುದು ಇವರ ಕೆಲಸ.
ಯಕ್ಷಗಾನದಲ್ಲಿ ಭಾಗವತರ ಕಾರ್ಯ ಇಷ್ಟಕ್ಕೇ ಸೀಮಿತಗೊಳ್ಳುವುದಿಲ್ಲ. ಒಬ್ಬ ಅರ್ಥಧಾರಿ, ಪದ್ಯದ
ಅರ್ಥವನ್ನು ಸಮರ್ಥವಾಗಿ ವ್ಯಾಖ್ಯಾನಿಸಲು ತಡವರಿಸಿದಲ್ಲಿ ಆತನನ್ನು ಆಪತ್ತಿನಿಂದ ಪಾರು
ಮಾಡುವುದೇ ಭಾಗವತರು.
ಭಾಗವತರ ಜ್ಞಾನ: ಯಾರೇ ಒಬ್ಬ ಯಕ್ಷಗಾನ ಕಲಾವಿದ( ಹಿಮ್ಮೇಳ, ಮುಮ್ಮೇಳ ಯಾವುದೇ ಇರಲಿ)
ಯಕ್ಷಗಾನದ ಸಮಸ್ತ ಆಯಾಮಗಳನ್ನೂ ತಿಳಿದಿರಬೇಕಾಗುತ್ತದೆ. ಅದರಲ್ಲೂ ಭಾಗವತರು
ಸೂತ್ರಧಾರಿಯಾಗಿರುವುದರಿಂದ ಕಡ್ಡಾಯವಾಗಿ ತಿಳಿದುಕೊಂಡಿರಬೇಕು. ಪ್ರಸಂಗದ ಸಂಪೂರ್ಣ ಜ್ಞಾನ
ಅವರಲ್ಲಿರಬೇಕು.
ತಾಳ, ರಾಗ ಶೃತಿ ಎಲ್ಲವನ್ನೂ ಸೂಕ್ತ ರೀತಿಯಲ್ಲಿ ಹೊಂದಿಸಿಕೊಂಡು ಹೋಗುವ ಕಲೆ ಅವರಿಗೆ
ಕರಗತವಾಗಿರಬೇಕು.
ಒಂದು ಪ್ರಸಂಗದ ಪದ್ಯ ಹಲವಾರು ರಾಗಗಳಿಂದ ಕೂಡಿರುತ್ತದೆ. (ರಾಗಗಳ ಬಗ್ಗೆ ಮುಂದಿನ ದಿನಗಳಲ್ಲಿ
ಪ್ರಕಟಿಸಲಾಗುವುದು.) ಈ ಎಲ್ಲಾ ರಾಗಗಳನ್ನು ಅಭ್ಯಸಿಸಿದರಷ್ಟೇ ಒಬ್ಬಾತ ಭಾಗವತ ಅನ್ನಿಸಿಕೊಳ್ಳಲು
ಸಾಧ್ಯ. ಕೇವಲ ರಾಗ ಗೊತ್ತಿದ್ದರಷ್ಟೇ ಸಾಲದು, ಯಾವ ಪದ್ಯಕ್ಕೆ ಯಾವ ರಾಗ ಎಂಬುದನ್ನೂ
ಅರಿತಿರಬೇಕು. ಅದೆಷ್ಟೋ ಪ್ರಸಂಗಗಳನ್ನು ಕಂಠಪಾಠ ಮಾಡಿದ ಭಾಗವತರೂ ಇದ್ದಾರೆ.
ಉದಾಹರಣೆಗೆ ಬಲಿಪ ನಾರಾಯಣ ಭಾಗವತರು 150ಕ್ಕೂ ಹೆಚ್ಚು ಪ್ರಸಂಗಗಳನ್ನು ಕಂಠಪಾಠ
ಮಾಡಿದ್ದಾರೆ.
ಭಾಗವತರ ವೇಷ ಭೂಷಣ: ಯಕ್ಷಗಾನದಲ್ಲಿ ವೇಷಧಾರಿಗಳಿಗೆ ಮಾತ್ರ ನಿರ್ದಿಷ್ಟ ವೇಷ
ಭೂಷಣಗಳಿರುವುದಲ್ಲ. ಹಿಮ್ಮೇಳದವರೂ ಸಾಂಪ್ರದಾಯಿಕ ಉಡುಗೆ ಧರಿಸುವುದು ಪದ್ಧತಿ. ಭಾಗವತರು
ಸೇರಿದಂತೆ ಎಲ್ಲಾ ಹಿಮ್ಮೇಳದವರು ಬಿಳಿ ಪಂಚೆ, ಅದಕ್ಕೊಪ್ಪುವ ಸಾಂಪ್ರದಾಯಿಕ ಅಂಗಿ (ಜುಬ್ಬಾ ಕೂಡ
ಆದೀತು.), ಹೆಗಲಿಗೊಂದು ಶಲ್ಯ, ತಲೆಗೆ ಕೆಂಪು ರುಮಾಲು ಧರಿಸಬೇಕು.
ಪ್ರಮುಖ ಭಾಗವತರು: ಯಕ್ಷಗಾನ ಕ್ಷೇತ್ರದಲ್ಲಿ ಹಲವಾರು ಭಾಗವತರು ಕೀರ್ತಿ ಶಿಖರ ಏರಿದ್ದಾರೆ,
ಹಲವಾರು ಮಂದಿ ಆ ಹಾದಿಯಲ್ಲಿದ್ದಾರೆ. ಇಲ್ಲಿ ಸಾಂದರ್ಭಿಕವಾಗಿ ಕೆಲವು ಹೆಸರುಗಳನ್ನಷ್ಟೇ
ಉಲ್ಲೇಖಿಸುತ್ತೇನೆ. ಹಾಗಂತ ಇಷ್ಟೇ ಮಂದಿ ಭಾಗವತರು ಇರುವುದು ಎಂದರ್ಥವಲ್ಲ. ಎಲ್ಲಾ ಭಾಗವತರ
ಬಗೆಗಿನ ವಿವರಗಳನ್ನು ಧೀಂಕಿಟ ಬಳಗ ಪ್ರಕಟಿಸುತ್ತದೆ.
1. ದಾಮೋದರ ಮಂಡೆಚ್ಚ
2. ಕಡತೋಕ ಮಂಜುನಾಥ ಭಾಗವತ
3. ಇರಾ ಗೋಪಾಲ ಕೃಷ್ಣ ಭಟ್ಟ
4. ಬಲಿಪ ನಾರಾಯಣ ಭಾಗವತ
5. ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ
6. ಪದ್ಯಾಣ ಗಣಪತಿ ಭಟ್ಟ
7. ಪುತ್ತಿಗೆ ರಘುರಾಮ ಹೊಳ್ಳ
8. ದಿನೇಶ ಅಮ್ಮಣ್ಣಾಯ
9. ಬಲಿಪ ಪ್ರಸಾದ ಭಟ್ಟ
10. ಗುಂಡ್ಮಿ ಕಾಳಿಂಗ ನಾವಡ ( ಭಾಗವತಿಕೆಗೆ ಆಧುನಿಕ ಸ್ಪರ್ಶ ನೀಡಿದವರು ಗುಂಡ್ಮಿ ಕಾಳಿಂಗ
ನಾವಡರು. ಭಾವಗೀತೆಗಳನ್ನೂ ಪ್ರಸಂಗಕ್ಕೆ ಅಳವಡಿಸಿ ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ
ನಾವಡರದ್ದು. ಚಿಕ್ಕ ವಯಸ್ಸಿನಲ್ಲೇ ಯಕ್ಷಗಾನ ಪ್ರವೇಶಿಸಿದ ಅವರು, ಅಷ್ಟೇ ಬೇಗ ಕೀರ್ತಿ ಶಿಖರ
ಏರಿದವರು.)
ಲೇಖನ: ಸಂಗೀತಾ ಪುತ್ತೂರು